ಮೃತರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ಘೋಷಿಸಿದ ಜಮ್ಮು-ಕಾಶ್ಮೀರ ಸರಕಾರ

Update: 2025-04-23 20:19 IST
ಮೃತರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ಘೋಷಿಸಿದ ಜಮ್ಮು-ಕಾಶ್ಮೀರ ಸರಕಾರ

ಉಮರ್ ಅಬ್ದುಲ್ಲಾ | PC : PTI 

  • whatsapp icon

ಶ್ರೀನಗರ: ಮಂಗಳವಾರ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ಭೀಕರ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಜಮ್ಮು ಮತ್ತು ಕಾಶ್ಮೀರ ಸರಕಾರ ಬುಧವಾರ ಘೋಷಿಸಿದೆ.

‘‘ಪಹಲ್ಗಾಮ್ ನಲ್ಲಿ ಮಂಗಳವಾರ ನಡೆದ ಭೀಕರ ಭಯೋತ್ಪಾದಕ ದಾಳಿಯಿಂದ ತೀವ್ರ ಆಘಾತ ಮತ್ತು ದುಃಖವಾಗಿದೆ. ಅಮಾಯಕ ನಾಗರಿಕರ ವಿರುದ್ಧ ಮಾಡಲಾಗಿರುವ ಈ ಅನಾಗರಿಕ ಹಾಗೂ ವಿವೇಚನಾರಹಿತ ದಾಳಿಗೆ ನಮ್ಮ ಸಮಾಜದಲ್ಲಿ ಸ್ಥಾನವಿಲ್ಲ. ನಾವು ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಅಮೂಲ್ಯ ಜೀವಗಳ ನಷ್ಟಕ್ಕೆ ನಾವು ದುಃಖಿಸುತ್ತೇವೆ’’ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ ಸಂದೇಶದಲ್ಲಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದಲ್ಲಾ ಹೇಳಿದ್ದಾರೆ.

ಎಷ್ಟೇ ಮೊತ್ತದ ಹಣವು ಪ್ರೀತಿ ಪಾತ್ರರ ನಷ್ಟವನ್ನು ಎಂದಿಗೂ ತುಂಬಲಾರದು, ಆದರೆ, ನಮ್ಮ ಬೆಂಬಲವನ್ನು ವ್ಯಕ್ತಪಡಿಸುವ ಮತ್ತು ನಿಮ್ಮೊಂದಿಗೆ ನಾವಿದ್ದೇವೆ ಎನ್ನುವುದನ್ನು ಸೂಚಿಸುವ ಸಂಕೇತವಾಗಿ ಮೃತರ ಕುಟುಂಬಗಳಿಎ ತಲಾ 10 ಲಕ್ಷ ರೂ. ಪರಿಹಾರವನ್ನು ಜಮ್ಮು ಮತ್ತು ಕಾಶ್ಮೀರ ಸರಕಾರ ಘೋಷಿಸುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಅದೇ ವೇಳೆ, ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂ. ಮತ್ತು ಅಲ್ಪಸ್ವಲ್ಪ ಗಾಯಗಳಾದವರಿಗೆ ಒಂದು ಲಕ್ಷ ರೂ. ಪರಿಹಾರವನ್ನೂ ಅವರು ಇದೇ ಸಂದರ್ಭದಲ್ಲಿ ಘೋಷಿಸಿದರು.

ಮೃತರ ಪಾರ್ಥಿವ ಶರೀರಗಳನ್ನು ಅವರ ಮನೆಗಳಿಗೆ ಘನತೆಯಿಂದ ಸಾಗಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಬ್ದುಲ್ಲಾ ತಿಳಿಸಿದರು.

‘‘ಗಾಯಗೊಂಡವರಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಸಂತ್ರಸ್ತ ಕುಟುಂಬಗಳಿಗೆ ನಮ್ಮ ಸಾಂತ್ವಾನವಿದೆ. ನಿಮ್ಮ ದುಃಖದಲ್ಲಿ ನಾವೂ ಭಾಗಿಯಾಗಿದ್ದೇವೆ, ಈ ಸಂಕಷ್ಟದ ಸಮಯದಲ್ಲಿ ನಿಮ್ಮೊಂದಿಗೆ ನಾವಿದ್ದೇವೆ’’ ಎಂದು ಅಬ್ದುಲ್ಲಾ ಹೇಳಿದ್ದಾರೆ.

► ಕಾರ್ಮಿಕನ ಕುಟುಂಬದ ಜವಾಬ್ದಾರಿ ವಹಿಸುತ್ತೇವೆ

ಪಹಲ್ಗಾಮ್ನಲ್ಲಿ ನಡೆದ ಅಮಾನುಷ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿರುವ ಕಾರ್ಮಿಕನ ಕುಟುಂಬವನ್ನು ರಾಜ್ಯ ಸರಕಾರ ನೋಡಿಕೊಳ್ಳುವುದು ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಹೇಳಿದ್ದಾರೆ.

‘‘ಏನು ಹೇಳಲಿ? ಇದನ್ನು ನಾನು ಖಂಡಿಸುತ್ತೇನೆ. ದಃಖತಪ್ತ ಕುಟುಂಬಗಳಿಗೆ ಸಾಂತ್ವನ ಹೇಳುತ್ತೇನೆ. ವಿಹಾರಕ್ಕಾಗಿ ಇಲ್ಲಿಗೆ ಪ್ರವಾಸಿಗರು ಬಂದಿದ್ದರು. ಅವರು ಮೃತರಾಗಿದ್ದಾರೆ. ಕುಟುಂಬವನ್ನು ನೋಡಿಕೊಳ್ಳುವುದಕ್ಕಾಗಿ ಬಡ ಕಾರ್ಮಿಕರೊಬ್ಬರು ಇಲ್ಲಿಗೆ ಬಂದಿದ್ದರು. ಅವರು ಮೃತಪಟ್ಟಿದ್ದಾರೆ. ಅವರು ಭಯೋತ್ಪಾದಕರನ್ನು ಎದುರಿಸಲು ಪ್ರಯತ್ನ ಪಟ್ಟರು ಎನ್ನುವುದನ್ನು ನಾನು ಕೇಳಿದ್ದೇನೆ. ಅವರ ಬಂದೂಕನ್ನು ಸೆಳೆಯಲು ಯತ್ನಿಸಿದರು. ಆದರೆ, ಅವರನ್ನು ಭಯೋತ್ಪಾದಕರು ಕೊಂದರು. ಅವರ ಕುಟುಂಬದ ಸದಸ್ಯರನ್ನು ನಾವು ನೋಡಿಕೊಳ್ಳಬೇಕಾಗಿದೆ. ಅವರೊಂದಿಗೆ ನಾವು ಇದ್ದೇವೆ ಮತ್ತು ನಾವು ಅವರಿಗೆ ಸಹಾಯ ಮಾಡುತ್ತೇವೆ’’ ಎಂದು ಮಾಧ್ಯಮಗಳೊಂದಿಗೆ ಮಾತನಾಡಿದ ಉಮರ್ ಅಬ್ದುಲ್ಲಾ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News