ಜಮ್ಮು: ಬಸ್ ಮೇಲೆ ಶಂಕಿತ ಉಗ್ರರ ದಾಳಿ ; ರಿಯಾಸಿ ತಲುಪಿದ ಎನ್ಐಎ ತಂಡ
ಶ್ರೀನಗರ: ಕನಿಷ್ಠ 9 ಮಂದಿ ಸಾವನ್ನಪ್ಪಲು ಹಾಗೂ 33 ಮಂದಿ ಗಾಯಗೊಳ್ಳಲು ಕಾರಣವಾದ ಜಮ್ಮುವಿನ ರಿಯಾಸಿಯಲ್ಲಿ ಯಾತ್ರಾರ್ಥಿಗಳ ಬಸ್ ಮೇಲೆ ನಡೆದ ಭಯೋತ್ಪಾದಕ ದಾಳಿಯ ಕುರಿತು ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯ ತಂಡ ಜಮ್ಮು ಹಾಗೂ ಕಾಶ್ಮೀರಕ್ಕೆ ತಲುಪಿದೆ.
ಘಟನೆಯ ಕುರಿತು ನಡೆಯುತ್ತಿರುವ ತನಿಖೆಗೆ ಪೊಲೀಸರಿಗೆ ನೆರವು ನೀಡಲು ಹಾಗೂ ಪರಿಸ್ಥಿತಿ ಅವಲೋಕಿಸಲು ಎನ್ಐಎ ತಂಡ ರಿಯಾಸಿಗೆ ತಲುಪಿದೆ. ಘಟನಾ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿ ನೆರವು ನೀಡಲು ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಧಿವಿಜ್ಞಾನ ತಂಡ ಕೂಡ ಅಲ್ಲಿಗೆ ತಲುಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತೀಯ ಸೇನೆಯ ಯೋಧರು ಹಾಗೂ ಇತರ ಭದ್ರತಾ ಸಿಬ್ಬಂದಿ ಈ ದಾಳಿಯಲ್ಲಿ ಭಾಗಿಯಾದ ಉಗ್ರರನ್ನು ಪತ್ತೆ ಹಚ್ಚಲು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸದಸ್ಯರ ನೆರವಿನೊಂದಿಗೆ ಭಾರತೀಯ ಸೇನೆ ಶೋಧ ಕಾರ್ಯಾಚರಣೆಯ ನೇತೃತ್ವ ವಹಿಸಿದೆ. ಉಗ್ರರು ಅಡಗಿದ್ದಾರೆ ಎಂದು ಶಂಕಿಸಲಾದ ಸಮೀಪದ ಅರಣ್ಯಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲು ಡ್ರೋನ್ಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಉತ್ತರಪ್ರದೇಶದಿಂದ ದಿಲ್ಲಿಗೆ ಯಾತ್ರಾರ್ಥಿಗಳನ್ನು ಕೊಂಡೊಯ್ಯುತ್ತಿದ್ದ ಬಸ್ನ ಮೇಲೆ ಶಂಕಿತ ಉಗ್ರರು ಹೊಂಚು ದಾಳಿ ನಡೆಸಿದ ಬಳಿಕ ಬಸ್ಸು ಕಂದಕಕ್ಕೆ ಉರುಳಿ ಬಿತ್ತು. ಶಿವ ಖೋರಿ ದೇವಾಲಯದಿಂದ ಪೋನಿ ಪ್ರದೇಶದಲ್ಲಿರುವ ತೆರ್ಯಾತ್ ಗ್ರಾಮದ ಸಮೀಪದ ಕಾಟ್ರಾದಲ್ಲಿರುವ ಮಾತಾ ವೈಷ್ಣೋ ದೇವಿ ದೇವಾಲಯಕ್ಕೆ ಬಸ್ ಯಾತ್ರಾರ್ಥಿಗಳನ್ನು ಕೊಂಡೊಯ್ಯುತ್ತಿದ್ದ ಸಂದರ್ಭ ಶಂಕಿತ ಉಗ್ರರು ದಾಳಿ ನಡೆಸಿದ್ದರು. ಬಸ್ ರಸ್ತೆಯಿಂದ ಉರುಳಿತ್ತು ಹಾಗೂ ಆಳ ಕಂದಕಕ್ಕೆ ಬಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕನಿಷ್ಠ 9 ಮಂದಿ ಮೃತಪಟ್ಟ ಹಾಗೂ 33 ಮಂದಿ ಗಾಯಗೊಂಡ ಈ ದಾಳಿಯ ಹೊಣೆಯನ್ನು ಲಷ್ಕರೆ ತಯ್ಯಿಬಾ ಬೆಂಬಲಿತ ದಿ ರೆಸಿಸ್ಟೆಂಟ್ ಫ್ರಂಟ್ (TRF) ಹೊತ್ತುಕೊಂಡಿದೆ. ಟಿಆರ್ಎಫ್ ಸಂದೇಶದಲ್ಲಿ ಪ್ರವಾಸಿಗರು ಹಾಗೂ ಸ್ಥಳೀಯರಲ್ಲದವರ ಮೇಲೆ ಇಂತಹ ಇನ್ನಷ್ಟು ದಾಳಿಗಳನ್ನು ನಡೆಸುವುದಾಗಿ ಅದು ಎಚ್ಚರಿಕೆ ನೀಡಿದೆ.