ಎಂ.ಎಸ್. ಧೋನಿಗೆ ನೋಟಿಸ್ ಜಾರಿಗೊಳಿಸಿದ ಜಾರ್ಖಂಡ್ ಹೈಕೋರ್ಟ್
ರಾಂಚಿ: ಭಾರತದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಅವರ ಮಾಜಿ ಪಾಲುದಾರರಾದ ಮಿಹಿರ್ ದಿವಾಕರ್ ಹಾಗೂ ಸೌಮ್ಯ ದಾಸ್ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಹೈಕೋರ್ಟ್ ಮಂಗಳವಾರ ಧೋನಿಗೆ ನೋಟಿಸ್ ಜಾರಿಗೊಳಿಸಿದೆ.
ಆರ್ಕ ಸ್ಪೋರ್ಟ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ಸ್ ಲಿಮಿಟೆಡ್ ನಿರ್ದೇಶಕರಾದ ಡಿವಾಕರ್ ಹಾಗೂ ದಾಸ್ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿ ಕ್ರಿಕೆಟ್ ಅಕಾಡೆಮಿಗಳನ್ನು ತೆರೆಯುವ ಒಪ್ಪಂದವನ್ನು ಅವರೊಂದಿಗೆ ಮಾಡಿಕೊಂಡಿದ್ದರು ಎನ್ನಲಾಗಿದೆ.
ನನಗೆ ದಿವಾಕರ್ ಮತ್ತು ದಾಸ್ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ ಮಹೇಂದ್ರ ಸಿಂಗ್ ಧೋನಿ ಜನವರಿ 5ರಂದು ರಾಂಚಿಯಲ್ಲಿ ಕ್ರಿಮಿನಲ್ ದೂರು ದಾಖಲಿಸಿದ್ದರು.
2021ರಲ್ಲಿ ಅವರಿಗೆ ನೀಡಲಾಗಿದ್ದ ಅನುಮತಿಯನ್ನು ಹಿಂಪಡೆದರೂ, ಅವರು ನನ್ನ ಹೆಸರಿನಲ್ಲಿ ಅಕಾಡೆಮಿಗಳನ್ನು ತೆರೆಯುವುದನ್ನು ಮುಂದುವರಿಸಿದ್ದರು ಎಂದು ಧೋನಿ ತಮ್ಮ ದೂರಿನಲ್ಲಿ ಆರೋಪಿಸಿದ್ದರು. ಅಲ್ಲದೆ, ನನಗೆ ರೂ. 15 ಕೋಟಿ ವಂಚಿಸಲಾಗಿದೆ ಎಂದೂ ಅವರು ಅಪಾದಿಸಿದ್ದರು.
ತಮ್ಮ ವಿರುದ್ಧದ ಪ್ರಕರಣವನ್ನು ರಾಂಚಿಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಗಣನೆಗೆ ತೆಗೆದುಕೊಂಡಿರುವುದನ್ನು ಪ್ರಶ್ನಿಸಿ ದಿವಾಕರ್ ಹಾಗೂ ದಾಸ್ ಹೈಕೋರ್ಟ್ ಮೊರೆ ಹೋಗಿದ್ದರು.
ಈ ಕುರಿತು ತಮ್ಮ ನಿಲುವನ್ನು ವ್ಯಕ್ತಪಡಿಸಲು ನ್ಯಾಯಾಲಯಕ್ಕೆ ಹಾಜರಾಗುವಂತೆ ಧೋನಿಗೆ ಹೈಕೋರ್ಟ್ ಸೂಚಿಸಿದೆ.