ರಾಹುಲ್ ವಿರುದ್ಧದ ಕಾನೂನು ಕ್ರಮಗಳನ್ನು ಕೈಬಿಡಲು ಜಾರ್ಖಂಡ್ ಹೈಕೋರ್ಟ್ ನಕಾರ
ರಾಯ್ಪುರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ‘ ಕೊಲೆ ಆರೋಪಿ’ ಎಂಬುದಾಗಿ ನಿಂದಿಸಿದ್ದೇನೆಂಬ ಆರೋಪಕ್ಕೆ ಸಂಬಂಧಿಸಿ ತನ್ನ ವಿರುದ್ಧ ಕೈಗೊಳ್ಳಲಾಗಿರುವ ಕಾನೂನುಕ್ರಮಗಳನ್ನು ರದ್ದುಪಡಿಸಬೇಕೆಂದು ಕೋರಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ನ್ಯಾಯಮೂರ್ತಿ ಅಂಬುಜಾನಾಥ್ ಅವರು ಅರ್ಜಿಯ ಆಲಿಕೆ ನಡೆಸಿದ್ದರು. ರಾಹುಲ್ ಗಾಂಧಿ ಪರವಾಗಿ ನ್ಯಾಯವಾದಿಗಳಾದ ಪಿಯೂಶ್ ಚಿತ್ರೇಶ್ ಹಾಗೂ ದೀಪಂಕರ್ ರಾಯ್ ವಾದಿಸಿದ್ದರು.
ಈ ಪ್ರಕರಣದಲ್ಲಿ ತನ್ನ ವಿರುದ್ಧದ ಕಾನೂನುಕ್ರಮಗಳನ್ನು ಕೈಬಿಡಬೇಕೆಂದು ಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಲಿಖಿತ ಮನವಿಯನ್ನು ಫೆ.16ರಂದು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಆನಂತರ ನ್ಯಾಯಮೂರ್ತಿಯವರು ತನ್ನ ಆದೇಶವನ್ನು ಕಾದಿರಿಸಿದ್ದರು.
2018ರಲ್ಲಿ ಚಾಯ್ಬಸಾದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ರಾಹುಲ್ ಅವರು ಅಮಿತ್ ಶಾ ಅವರನ್ನು ಕೊಲೆ ಆರೋಪಿಯೆಂದು ದೂಷಿಸಿದ್ದಾರೆಂದು ಆರೋಪಿಸಲಾಗಿತ್ತು. ಈ ಬಗ್ಗೆ ಬಿಜೆಪಿ ನಾಯಕ ನವೀನ್ ಜಾ ಅವರು ರಾಹುಲ್ ವಿರುದ್ಧ ಜಾರ್ಖಂಡ್ ಹೈಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆಗ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ ವಿರುದ್ಧ ರಾಹುಲ್ ಅವರು ಆಕ್ಷೇಪಕಾರಿಯಾದ ಹೇಳಿಕೆಗಳನ್ನು ನೀಡಿದ್ದರೆಂದು ನವೀನ್ ಝಾ ಅರ್ಜಿಯಲ್ಲಿ ಆಪಾದಿಸಿದ್ದರು.