ನಾಳೆ ಜಾರ್ಖಂಡ್ ವಿಧಾನ ಸಭೆ ವಿಶ್ವಾಸ ಮತ
ರಾಂಚಿ : ಹೈದರಾಬಾದ್ ನಲ್ಲಿ ಬೀಡು ಬಿಟ್ಟಿರುವ ಆಡಳಿತಾರೂಢ ಜೆಎಂಎಂ ನೇತೃತ್ವದ ಮೈತ್ರಿಕೂಟ ‘ಮಹಾಘಟಬಂಧನ್’ನ ಸುಮಾರು 40 ಶಾಸಕರು ಫೆಬ್ರವರಿ 5 ಹಾಗೂ 6ರಂದು ನಡೆಯಲಿರುವ ನಿರ್ಣಾಯಕ ವಿಶ್ವಾಸಮತದಲ್ಲಿ ಪಾಲ್ಗೊಳ್ಳಲು ರವಿವಾರ ರಾಜ್ಯಕ್ಕೆ ಹಿಂದಿರುಗಿದ್ದಾರೆ.
ಹೇಮಂತ್ ಸೊರೇನ್ ಅವರು ಬಂಧಿತರಾದ ಹಿನ್ನೆಲೆಯಲ್ಲಿ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಚಂಪಯಿ ಸೊರೇನ್ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಖರೀದಿ ಭೀತಿಯಿಂದ ಶಾಸಕರನ್ನು ಹೈದರಾಬಾದ್ನ ಹೊರವಲಯದಲ್ಲಿರುವ ಶಾಮಿರಪೇಟ್ನ ಖಾಸಗಿ ರೆಸಾರ್ಟ್ ಗೆ ಕಳುಹಿಸಲಾಗಿತ್ತು.
81 ಸದಸ್ಯ ಬಲದ ಜಾರ್ಖಂಡ್ ವಿಧಾನ ಸಭೆಯಲ್ಲಿ ಜೆಎಂಎಂ, ಕಾಂಗ್ರೆಸ್ ಹಾಗೂ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮೈತ್ರಿಕೂಟದ 47 ಶಾಸಕರು ಇದ್ದಾರೆ. ಓರ್ವ ಸಿಪಿಐಎಂಎಲ್ (ಎಲ್) ಶಾಸಕ ಬಾಹ್ಯ ಬೆಂಬಲ ನೀಡಿದ್ದಾರೆ. ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳು 29 ಶಾಸಕರನ್ನು ಹೊಂದಿದೆ.
ಸರಕಾರ ರಚನೆಗೆ ಹಕ್ಕು ಮಂಡಿಸುವ ಸಂದರ್ಭ ಚಂಪಯಿ ಸೊರೇನ್ ಅವರಿಗೆ 43 ಶಾಸಕರ ಬೆಂಬಲ ಇತ್ತು. ‘‘ಈ ಸಂಖ್ಯೆ 46-47ಕ್ಕೆ ತಲುಪುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಆದುದರಿಂದ ಯಾವುದೇ ಸಮಸ್ಯೆ ಇಲ್ಲ. ನಮ್ಮ ಘಟಬಂಧನ ತುಂಬಾ ಪ್ರಬಲವಾಗಿದೆ’’ ಎಂದು ಅವರು ಹೇಳಿದ್ದಾರೆ.
ಅಚಾತುರ್ಯ ನಡೆಯದೇ ಇದ್ದರೆ, ಜೆಎಂಎಂ ಸರಕಾರ ಬಹುಮತದ ಗಡಿ 41ನ್ನು ತಲುಪುವುದೆಂದು ನಿರೀಕ್ಷಿಸಲಾಗಿದೆ. ವಿಶ್ವಾಸಮತಕ್ಕೆ ಕೇವಲ ಒಂದು ದಿನ ಬಾಕಿ ಇರುವಾಗ ಜೆಎಂಎಂ ತನ್ನ ಎಲ್ಲಾ ಶಾಸಕರನ್ನು ಒಟ್ಟಿಗೆ ಇರಿಸುವಲ್ಲಿ ನಿರತವಾಗಿದೆ. ಮಾಧ್ಯಮ ವರದಿಯೊಂದರ ಪ್ರಕಾರ ಪಕ್ಷದ ಓರ್ವ ಶಾಸಕರು ವಿಶ್ವಾಸಮತಕ್ಕೆ ಗೈರಾಗುವ ಸಾಧ್ಯತೆ ಇದೆ.
ಇನ್ನೋರ್ವ ಶಾಸಕ ಲೋಬಿನ್ ಹೆಂಬ್ರೆಮ್ ಅವರು ಮುಖ್ಯಮಂತ್ರಿ ಚಂಪಯಿ ಸೊರೇನ್ ನೇತೃತ್ವದ ಸರಕಾರಕ್ಕೆ ಷರತ್ತಿಲ್ಲದೇವ ಬೆಂಬಲ ನೀಡುವುದಕ್ಕೆ ರವಿವಾರ ಒಪ್ಪಿಕೊಂಡಿದ್ದಾರೆ. ಜೆಎಂಎಂ ಮುಖ್ಯಸ್ಥ ಶಿಬು ಸೊರೇನ್ ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಅವರು ಸರಕಾರಕ್ಕೆ ಬೆಂಬಲ ನೀಡಬೇಕಾದರೆ ಸಾರಾಯಿ ಮಾರಾಟ ನಿಷೇಧ, ಅರಣ್ಯ ರಕ್ಷಣೆಗೆ ಕಠಿಣ ಕಾನೂನು ಹಾಗೂ ಜಲ ಸಂರಕ್ಷಣೆ ಮೊದಲಾದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹೇಳಿದ್ದಾರೆ.
ಹೇಮಂತ್ ಸೊರೇನ್ ಹಾಗೂ ಅವರ ಪಕ್ಷದ ವಿರುದ್ಧ ತನ್ನ ಬಂಡಾಯದ ಹೇಳಿಕೆಗಳಿಂದ ಜನಪ್ರಿಯರಾಗಿರುವ ಹೆಂಬ್ರಮ್ ಈ ವಿಷಯಗಳ ಜೊತೆಗೆ ಚೋಟಾ ನಾಗಪುರ ಹಿಡುವಳಿ (ಸಿಎನ್ಟಿ) ಕಾಯ್ದೆ ಹಾಗೂ ಸಂತಾಲ್ ಪರಗಣ ಹಿಡುವಳಿ (ಎಸ್ಪಿಟಿ) ಕಾಯ್ದೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿದ್ದಾರೆ.
ಸಾಹಿಬ್ಗಂಜ್ ಜಿಲ್ಲೆಯ ಬೋರಿಯೊ ಕ್ಷೇತ್ರದ ಶಾಸಕರಾಗಿರುವ ಹೆಂಬ್ರಮ್ ‘ರಿಸೋರ್ಟ್ ರಾಜಕೀಯ’ಕ್ಕಾಗಿ ರೆಸಾರ್ಟ್ ಗೆ ತೆರಳಿದ ಪಕ್ಷದ ನಿರ್ಧಾರವನ್ನು ಕೂಡ ಪ್ರಶ್ನಿಸಿದ್ದಾರೆ. ಅಲ್ಲಿಗೆ (ಹೈದರಾಬಾದ್)ಹೋಗುವ ಅಗತ್ಯೆ ಏನಿತ್ತು? ನಾವು ಒಗ್ಗಟ್ಟಾಗಿದ್ದರೆ ಇಲ್ಲೇ ಉಳಿಯಬೇಕು ಎಂದು ಅವರು ಹೇಳಿದ್ದಾರೆ.
ವಿಶ್ವಾಸಮತದಲ್ಲಿ ಪಾಲ್ಗೊಳ್ಳಲು ಹೇಮಂತ್ ಸೊರೇನ್ಗೆ ಅನುಮತಿ
ಈ ನಡುವೆ ಜಾರ್ಖಂಡ್ ವಿಧಾನ ಸಭೆಯಲ್ಲಿ ಫೆಬ್ರವರಿ 5ರಂದು ನಡೆಯಲಿರುವ ವಿಶ್ವಾಸಮತದಲ್ಲಿ ಪಾಲ್ಗೊಳ್ಳಲು ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಗೆ ರಾಂಚಿಯ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.