ಪಹಲ್ಗಾಮ್ ದಾಳಿಗೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿಯನ್ನು ದೂಷಿಸಿ ಟ್ರೋಲ್ ಗೊಳಗಾದ ಜಾರ್ಖಂಡ್ ಸಚಿವ

Update: 2025-04-26 17:01 IST
ಪಹಲ್ಗಾಮ್ ದಾಳಿಗೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿಯನ್ನು ದೂಷಿಸಿ ಟ್ರೋಲ್ ಗೊಳಗಾದ ಜಾರ್ಖಂಡ್ ಸಚಿವ
  • whatsapp icon

ರಾಂಚಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹೊಣೆ ಹೊತ್ತು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ರಾಜೀನಾಮೆ ನೀಡಬೇಕು ಎಂಬ ವಿಚಿತ್ರ ಹೇಳಿಕೆ ನೀಡುವ ಮೂಲಕ ಜಾರ್ಖಂಡ್ ನ ನಗರಾಭಿವೃದ್ಧಿ ಸಚಿವ ಸುದಿವ್ಯ ಕುಮಾರ್ ವಿವಾದಕ್ಕೆ ಗುರಿಯಾಗಿದ್ದಾರೆ. ಅವರ ಈ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಈ ಹೇಳಿಕೆ ವಿರುದ್ಧ ವ್ಯಾಪಕ ಟೀಕೆ, ವ್ಯಂಗ್ಯ ಹಾಗೂ ವಿಡಂಬನೆ ವ್ಯಕ್ತವಾಗಿದೆ.    

ಇದಕ್ಕೂ ಮುನ್ನ, 26 ಮಂದಿ ಪ್ರವಾಸಿಗರನ್ನು ಬಲಿ ತೆಗೆದುಕೊಂಡಿದ್ದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಪ್ರತಿಕ್ರಿಯೆ ನೀಡಿದ್ದ ಸಚಿವ ಸುದಿವ್ಯ ಕುಮಾರ್, ಪಹಲ್ಗಾಮ್ ಭಯೋತ್ಪಾದಕ ದಾಳಿಗೂ ಹಾಗೂ ಗಿರಿ ರಾಜ್ಯವಾದ ಹಿಮಾಚಲ ಪ್ರದೇಶಕ್ಕೂ ಯಾವುದೇ ಸಂಬಂಧವಿಲ್ಲದಿದ್ದರೂ, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಈ ಘಟನೆಯ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂಬ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದರು.

ಈ ಹೇಳಿಕೆಯ ಬೆನ್ನಿಗೇ ಸಾಮಾಜಿಕ ಮಾಧ್ಯಕಮಗಳಲ್ಲಿ ಮೀಮ್, ವಿಡಂಬನೆ ಹಾಗೂ ಟ್ರೋಲ್ ಗಳ ಮಹಾಪೂರವೇ ಹರಿಯತೊಡಗಿದೆ. ತಮ್ಮ ಹೇಳಿಕೆ ತಮಗೇ ತಿರುಬಾಣವಾಗುತ್ತಿದ್ದಂತೆ, ಶುಕ್ರವಾರ ಈ ಕುರಿತು ಸ್ಪಷ್ಟನೆ ನೀಡಿದ ಸುದಿವ್ಯ ಕುಮಾರ್, ನನ್ನ ಹೇಳಿಕೆಯು ವಿಡಂಬನೆಯ ಉದ್ದೇಶ ಹೊಂದಿತ್ತು ಎಂದು ಹೇಳಿದರು.

“ಈ ಗಂಭೀರ ಘಟನೆಯ ಹೊಣೆಯನ್ನು ಯಾರೂ ತೆಗೆದುಕೊಳ್ಳದೆ ಇರುವಾಗ, ಕಾಂಗ್ರೆಸ್ ಮುಖ್ಯಮಂತ್ರಿಯಾದ ಸುಖ್ವಿಂದರ್ ಸಿಂಗ್ ಸುಖು ಅವರು ರಾಜೀನಾಮೆ ನೀಡಬೇಕು ಎಂದು ನಾನು ವ್ಯಂಗ್ಯಭರಿತವಾಗಿ ಹೇಳಿದ್ದೆ” ಎಂದು ಅವರು ವಿವರಿಸಿದರು.

ಆದರೆ, ಹೀಗೆ ಸ್ಪಷ್ಟನೆ ನೀಡುವಾಗಲೂ, ಈಗ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯಾಗಿರುವ ಮೆಹಬೂಬಾ ಮುಫ್ತಿಯನ್ನು ಜಮ್ಮು ಮತ್ತು ಕಾಶ್ಮೀರರದ ಮುಖ್ಯಮಂತ್ರಿ ಎಂದು ಉಲ್ಲೇಖಿಸುವ ಮೂಲಕ ಮತ್ತಷ್ಟು ಮುಜುಗರಕ್ಕೊಳಗಾದರು.

ಸುದಿವ್ಯ ಕುಮಾರ್ ಹೇಳಿಕೆಯ ವಿರುದ್ಧ ವಾಗ್ದಾಳಿ ನಡೆಸಿದ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಸಿ.ಪಿ.ಸಿಂಗ್, “ಶಾಸಕ ಇರ್ಫಾನ್ ಅನ್ಸಾರಿರಂತಹ ಹುಚ್ಚು ಹಾಗೂ ಹಿಂದೂ ವಿರೋಧಿ ನಾಯಕರೊಂದಿಗಿನ ಸಂಪರ್ಕದಿಂದಾಗಿ ಅವರು ತಮ್ಮ ಮಾನಸಿಕ ಸಮತೋಲನ ಕಳೆದುಕೊಂಡಿರುವಂತೆ ಕಂಡು ಬರುತ್ತಿದೆ. ಮೊದಲು ಅವರು ಪಹಲ್ಗಾಮ್ ನಲ್ಲಿನ ದಾಳಿಗಾಗಿ ಹಿಮಾಚಲ ಪ್ರದೇಶ ಮುಖ್ಯಮಂತ್ರಿಯ ರಾಜೀನಾಮೆಗೆ ಆಗ್ರಹಿಸಿದರು. ನಂತರ, ಮೆಹಬೂಬಾ ಮುಫ್ತಿಯನ್ನು ಜಮ್ಮು ಮತ್ತು ಕಾಶ್ಮೀರರದ ಮುಖ್ಯಮಂತ್ರಿ ಎಂದು ಕರೆಯುತ್ತಿದ್ದಾರೆ. ಈ ಗೊಂದಲವನ್ನು ನಿವಾರಿಸಲು ಮತ್ತೊಂದು ಪತ್ರಿಕಾ ಗೋಷ್ಠಿಯನ್ನು ಕರೆಯಲಾಗುತ್ತದೆಯೆ?” ಎಂದು ಛೇಡಿಸಿದ್ದಾರೆ.

ಜಾರ್ಖಂಡ್ ವಿಧಾನಸಭೆಯ ವಿಪಕ್ಷ ನಾಯಕ ಬಾಬುಲಾಲ್ ಮರಾಂಡಿ ಕೂಡಾ ಸುದಿವ್ಯ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದು, “ಸೂಕ್ಷ್ಮ ಭಯೋತ್ಪಾದಕ ದಾಳಿಯ ಬಗ್ಗೆ ಹಗುರವಾದ ಹೇಳಿಕೆ ನೀಡಿದ್ದಕ್ಕಾಗಿ ವ್ಯಾಪಕ ಟೀಕೆಗೆ ಒಳಗಾದ ನಂತರವಾದರೂ, ಅವರು ತಾವು ಮಾಡಿದ ತಪ್ಪನ್ನು ಒಪ್ಪಿಕೊಳ್ಳಬಹುದಿತ್ತು. ಅದರ ಬದಲು ಮತ್ತೊಂದು ಪತ್ರಿಕಾಗೋಷ್ಠಿ ನಡೆಸುವ ಮೂಲಕ ಅವರು ತಮ್ಮ ಅಸೂಕ್ಷ್ಮತೆ ಹಾಗೂ ಗಾಂಭೀರ್ಯದ ಕೊರತೆಯನ್ನು ಬಯಲು ಮಾಡಿಕೊಂಡಿದ್ದಾರೆ” ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲೂ ಕೂಡಾ ಸಚಿವ ಸುದಿವ್ಯ ಕುಮಾರ್ ಹೇಳಿಕೆಯ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಅವರ ಭೌಗೋಳಿಕ ಮತ್ತು ರಾಜಕೀಯ ತಿಳಿವಳಿಕೆ ಕುರಿತು ವ್ಯಂಗ್ಯ ಮಾಡಲಾಗಿದೆ. ಈ ಪೈಕಿ, ಓರ್ವ ಸಾಮಾಜಿಕ ಮಾಧ್ಯಮ ಬಳಕೆದಾರರು, “ಸುದಿವ್ಯ ಕುಮಾರ್ ಹೇಳಿಕೆಯ ನಂತರ ಗೂಗಲ್ ನಕ್ಷೆಗಳೂ ಗೊಂದಲಕ್ಕೀಡಾಗಿವೆ” ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News