ಜಾರ್ಖಂಡ್: ಪುನರ್ವಿವಾಹವಾಗುವ ವಿಧವೆಯರಿಗೆ 2 ಲಕ್ಷ ರೂ. ಪ್ರೋತ್ಸಾಹಧನ
ರಾಂಚಿ : ಜಾರ್ಖಂಡ್ ಮುಖ್ಯಮಂತ್ರಿ ಚಂಪಾಯ್ ಸೊರೇನ್ ನೇತೃತ್ವದ ಸರಕಾರವು ಬುಧವಾರ ದೇಶದಲ್ಲಿ ಪ್ರಪ್ರಥಮ ಬಾರಿಗೆ ‘ವಿಧವಾ ಪುನರ್ವಿವಾಹ ಪ್ರೋತ್ಸಾಹ ಯೋಜನೆ’ಗೆ ಚಾಲನೆ ನೀಡಿದೆ. ತಮ್ಮ ಪತಿ ಮೃತಪಟ್ಟ ಬಳಿಕ ಪುನರ್ ವಿವಾಹವಾಗುವ ಮಹಿಳೆಯರಿಗೆ ರಾಜ್ಯ ಸರಕಾರವು ಈ ಯೋಜನೆಯಡಿ 2 ಲಕ್ಷ ರೂ. ಪ್ರೋತ್ಸಾಹಧನವನ್ನು ನೀಡಲಿದೆ.
ಈ ಯೋಜನೆಯ ಫಲಾನುಭವಿ ಮಹಿಳೆಯು ಮರುವಿವಾಹಕ್ಕೆ ಯೋಗ್ಯವಾದ ವಯಸ್ಸಿನವಳಾಗಿರಬೇಕು ಹಾಗೂ ತನ್ನ ದಿವಂಗತ ಪತಿಯ ಮರಣಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂದು ಶಿಶು ಕಲ್ಯಾಣ ಹಾಗೂ ಸಾಮಾಜಿಕ ಕಲ್ಯಾಣ ಕಾರ್ಯದರ್ಶಿ ಮನೋಜ್ಕುಮಾರ್ ತಿಳಿಸಿದ್ದಾರೆ. ಸರಕಾರಿ ಉದ್ಯೋಗಿಗಳು,ಪಿಂಚಣಿದಾರರು ಮತ್ತು ಆದಾಯತೆರಿಗೆ ಪಾವತಿದಾರರನ್ನು ಯೋಜನೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದವರು ತಿಳಿಸಿದ್ದಾರೆ.
ತನ್ನ ಬಾಳಸಂಗಾತಿಯ ನಿಧನದ ಬಳಿಕ ಸಮಾಜದಲ್ಲಿ ಹಲವಾರು ಮಹಿಳೆಯರು ಒಬ್ಬಂಟಿಗಳಾಗುತ್ತಾರೆ ಹಾಗೂ ಅಸಹಾಯಕರಾಗಿರುತ್ತಾರೆ. ಅವರು ಮತ್ತೆ ಹೊಸ ಜೀವನವನ್ನು ಆರಂಭಿಸಬೇಕಾಗುತ್ತದೆ. ಆದುದರಿಂದ ಒಂದು ವೇಳೆ ವಿಧವೆಯರು ಮರುವಿವಾಹವಾಗಲು ಬಯಸಿದಲ್ಲಿ ರಾಜ್ಯ ಸರಕಾರವು ಅವರಿಗೆ ಆರ್ಥಿಕ ನೆರವು ಒದಗಿಸಿಸಲಿದೆ ಎಂದು ಚಂಪಾಯ್ ಸೊರೇನ್ ತಿಳಿಸಿದ್ಜ0ಆರೆ.
ಬುಧವಾರ ರಾಂಚಿಯ ತಾನಾ ಭಗತ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಜಾರ್ಖಂಡ್ ಮುಖ್ಯಮಂತ್ರಿಯವರು, 7 ಮಂದಿ ಫಲಾನುಭವಿಗಳಿ ತಲಾ ಎರಡು ಲಕ್ಷ ರೂ.ಗಳನ್ನು ವಿತರಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು.
ಅಂಗನವಾಡಿ ಕಾರ್ಮಿಕರಿಗೆ ಪ್ರತಿ ತಿಂಗಳು 9500 ರೂ. ಹಾಗೂ ಆಯಾಗಳಿಗೆ 4750 ರೂ. ಗಳ ಗೌರವಧನವನ್ನು ಅವರು ವಿತರಿಸಿದರು.