ಜೆಎನ್‌ಯು: ವಿದ್ಯಾರ್ಥಿ ಸಂಘದ ಚುನಾವಣೆಗೆ ಕೆಲವೇ ಗಂಟೆಗಳ ಮುನ್ನ ಎಡರಂಗದ ಅಭ್ಯರ್ಥಿಯ ನಾಮಪತ್ರ ರದ್ದುಗೊಳಿಸಿದ ಚುನಾವಣಾ ಸಮಿತಿ

Update: 2024-03-23 06:54 GMT

ಜೆಎನ್‌ಯು | Photo: scroll.in

ಹೊಸದಿಲ್ಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ (ಜೆಎನ್‌ಯು) ವಿದ್ಯಾರ್ಥಿ ಚುನಾವಣೆ ನಡೆಯುವ ಕೆಲವೇ ಗಂಟೆಗಳ ಮೊದಲು, ವಿಶ್ವವಿದ್ಯಾನಿಲಯದ ಚುನಾವಣಾ ಸಮಿತಿಯು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಯುನೈಟೆಡ್ ಲೆಫ್ಟ್ ಪ್ಯಾನೆಲ್ನಿಂದ ಸ್ಪರ್ಧಿಸಿದ್ದ ಸ್ವಾತಿ ಸಿಂಗ್ ಅವರ ಉಮೇದುವಾರಿಕೆಯನ್ನು ರದ್ದುಗೊಳಿಸಿದೆ ಎಂದು ʼದಿ ಹಿಂದೂʼ ವರದಿ ಮಾಡಿದೆ.

ಯುನೈಟೆಡ್ ಲೆಫ್ಟ್ ಪ್ಯಾನೆಲ್ ಬದಲಿಗೆ ಪ್ರಿಯಾಂಶಿ ಆರ್ಯ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಾಮನಿರ್ದೇಶನ ಮಾಡಿದೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯ ವಿಕಾಸ್ ಪಟೇಲ್ ಮಾರ್ಚ್ 19 ರಂದು ವಿದ್ಯಾರ್ಥಿಗಳ ಡೀನ್ ಗೆ ಪತ್ರ ಬರೆದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಕಳೆದ ವರ್ಷ ಕ್ಯಾಂಪಸ್ ನಲ್ಲಿ ಮಹಿಳಾ ಭದ್ರತಾ ಸಿಬ್ಬಂದಿಯನ್ನು ಎಳೆದಾಡಿದ್ದಾರೆ ಎಂದು ಆರೋಪಿಸಿ ಸ್ವಾತಿ ಸಿಂಗ್ ಅವರನ್ನು ವಿಶ್ವವಿದ್ಯಾಲಯದಿಂದ ವಜಾಗೊಳಿಸಲಾಗತ್ತು ಎಂದು ಎಬಿವಿಪಿ ಸದಸ್ಯ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

"ಮಾರ್ಚ್ 22 ರಂದು 2:00 ಗಂಟೆಗೆ ಮತದಾನ ಪ್ರಾರಂಭವಾಗುವ ಕೇವಲ ಏಳು ಗಂಟೆಗಳ ಮೊದಲು ಈ ಸೂಚನೆಯನ್ನು ನೀಡಲಾಗಿದೆ" ಎಂದು ಸ್ವಾತಿ ಸಿಂಗ್ ವಿಶ್ವವಿದ್ಯಾಲಯದ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಫೆಬ್ರವರಿಯಲ್ಲಿ ದೆಹಲಿ ಹೈಕೋರ್ಟ್ ತನ್ನ ವಿರುದ್ಧದ ವಿಶ್ವವಿದ್ಯಾಲಯದ ಆದೇಶವನ್ನು ರದ್ದುಗೊಳಿಸಿತ್ತು. ಆದರೂ ಮತದಾನದ ದಿನದಂದು ತನ್ನ ಉಮೇದುವಾರಿಕೆಯನ್ನು ರದ್ದುಗೊಳಿಸಲಾಗಿದೆ. ಇದು ತೀವ್ರ ಅನ್ಯಾಯ ಎಂದು ಅವರು ಹೇಳಿದ್ದಾರೆ.

ನಾಲ್ಕು ವರ್ಷಗಳ ನಂತರ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘಕ್ಕೆ ಚುನಾವಣೆ ನಡೆಯುತ್ತಿದೆ. ವಿಶ್ವವಿದ್ಯಾನಿಲಯದ ಕೇಂದ್ರೀಯ ಸಮಿತಿಯ ಸ್ಥಾನಗಳಿಗೆ 19 ಅಭ್ಯರ್ಥಿಗಳು ಮತ್ತು ಶಾಲಾ ಕೌನ್ಸಿಲರ್ಗಳಿಗೆ 42 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಕೇಂದ್ರ ಸಮಿತಿಯು ಅಧ್ಯಕ್ಷರು, ಉಪಾಧ್ಯಕ್ಷರು, ಜಂಟಿ ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿಗಳನ್ನು ಒಳಗೊಂಡಿದೆ. ಅಧ್ಯಕ್ಷ ಸ್ಥಾನಕ್ಕೆ ಎಂಟು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ವಿಶ್ವವಿದ್ಯಾನಿಲಯದ ಚುನಾವಣಾ ಪ್ರಕ್ರಿಯೆಯನ್ನು ಬಲಪಡಿಸುವಂತೆ ಕೋರಿ ವಿದ್ಯಾರ್ಥಿಗಳು ಸಲ್ಲಿಸಿದ ಮನವಿಯ ಮೇರೆಗೆ ದೆಹಲಿ ಹೈಕೋರ್ಟ್ ಶನಿವಾರದಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಗೆ ವೀಕ್ಷಕರಾಗಿ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ವಿ ರಾಮಸುಬ್ರಮಣಿಯನ್ ಅವರನ್ನು ನೇಮಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News