ಪತ್ರಕರ್ತೆ ಸೌಮ್ಯಾ ಹತ್ಯೆ ಪ್ರಕರಣ
ಹೊಸದಿಲ್ಲಿ: ಟಿ.ವಿ. ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಹತ್ಯೆ ಪ್ರಕರಣದಲ್ಲಿ ನಾಲ್ವರು ದೋಷಿಗಳು ಎಂದು ಹೊಸದಿಲ್ಲಿಯ ಸಾಕೇತ್ ನ್ಯಾಯಾಲಯ ಬುಧವಾರ ಘೋಷಿಸಿದೆ.
ಸೌಮ್ಯಾ ವಿಶ್ವನಾಥನ್ ಅವರಿಂದ ದರೋಡೆಗೈದ ಸೊತ್ತನ್ನು ಸ್ವೀಕರಿಸಿರುವುದಕ್ಕೆ ಇನ್ನೋರ್ವ ವ್ಯಕ್ತಿಯನ್ನು ಕೂಡ ದೋಷಿ ಎಂದು ನ್ಯಾಯಾಲಯ ಪರಿಗಣಿಸಿದೆ. ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಕುಮಾರ್ ಪಾಂಡೆ ಅವರು ಪ್ರಕರಣದ ತೀರ್ಪನ್ನು ಶುಕ್ರವಾರಕ್ಕೆ ಕಾಯ್ದಿರಿಸಿದರು.
ತನ್ನ ಕೆಲಸ ಮುಗಿಸಿ ಮುಂಜಾನೆ 3.30ಕ್ಕೆ ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದ ಸೌಮ್ಯಾ ಅವರನ್ನು ದಕ್ಷಿಣ ದಿಲ್ಲಿಯ ನೆಲ್ಸನ್ ಮಂಡೇಲಾ ಮಾರ್ಗದಲ್ಲಿ ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು. ಈ ಘಟನೆ 2008 ಸೆಪ್ಟಂಬರ್ 30ರಂದು ನಡೆದಿತ್ತು.
ದರೋಡೆ ಕಾರಣಕ್ಕಾಗಿ ಸೌಮ್ಯಾ ವಿಶ್ವನಾಥನ್ ಅವರನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸರು ಪ್ರತಿಪಾದಿಸಿದ್ದರು. ಈ ಪ್ರಕರಣದಲ್ಲಿ ರವಿ ಕಪೂರ್, ಅಮಿತ್ ಶುಕ್ಲಾ, ಬಲ್‌ಜೀತ್ ಮಲಿಕ್, ಅಜಯ್ ಕುಮಾರ್ ಹಾಗೂ ಅಜಯ್ ಎತಿ ಅವರನ್ನು ಬಂಧಿಸಲಾಗಿತ್ತು. ಅನಂತರ ಪೊಲೀಸರು ಅವರ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಒಸಿಒ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
2009ರಲ್ಲಿ ಬಿಪಿಒ ಉದ್ಯೋಗಿ ಜಿಗಿಶಾ ಘೋಷ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಂದರ್ಭ ಓರ್ವ ಆರೋಪಿ ತಾನು ಪತ್ರಕರ್ತೆಯ ಹತ್ಯೆಯಲ್ಲಿ ಕೂಡ ಭಾಗಿಯಾಗಿದ್ದೇ ಎಂದು ಒಪ್ಪಿಕೊಂಡಿದ್ದ. ಇದು ಸೌಮ್ಯಾ ವಿಶ್ವನಾಥನ್ ಅವರ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ನೀಡಿತ್ತು.
2009ರಲ್ಲಿ ಐಟಿ ಉದ್ಯೋಗಿ ಜಿಗಿಶಾ ಘೋಷ್ ಅವರನ್ನು ಹತ್ಯೆಗೈದ ಪ್ರಕರಣದಲ್ಲಿ ಮಲ್ಲಿಕ್, ರವಿ ಕಪೂರ್ ಹಾಗೂ ಅಮಿತ್ ಶುಕ್ಲಾ ಅವರು ದೋಷಿಗಳು ಎಂದು ಪರಿಗಣಿತರಾಗಿದ್ದರು. ಜಿಗಿಶಾ ಅವರ ಹತ್ಯೆಗೆ ಬಳಸಲಾದ ಶಸ್ತ್ರಾಸ್ತ್ರಗಳು ಪತ್ತೆಯಾಗಿರುವುದು ಪತ್ರಕರ್ತೆ ಸೌಮ್ಯಾ ಅವರ ಹತ್ಯೆ ಪ್ರಕರಣವನ್ನು ಬೇಧಿಸಲು ನೆರವಾಗಿತ್ತು ಎಂದು ಪೊಲೀಸರು ತಿಳಿಸಿದ್ದರು.