ತೀರ್ಪು ಬರೆಯಲು 'ಅಸಮರ್ಥ' ನ್ಯಾಯಾಧೀಶರನ್ನು ತರಬೇತಿಗೆ ಕಳುಹಿಸಿದ ಅಲಹಾಬಾದ್ ಹೈಕೋರ್ಟ್!

Update: 2025-04-27 08:30 IST
ತೀರ್ಪು ಬರೆಯಲು ಅಸಮರ್ಥ ನ್ಯಾಯಾಧೀಶರನ್ನು ತರಬೇತಿಗೆ ಕಳುಹಿಸಿದ ಅಲಹಾಬಾದ್ ಹೈಕೋರ್ಟ್!

PC: x.com/DNHindi

  • whatsapp icon

ಪ್ರಯಾಗ್ ರಾಜ್: ತೀರ್ಪು ಬರೆಯಲು ಅಸಮರ್ಥ ಎಂಬ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರೊಬ್ಬರನ್ನು ನ್ಯಾಯಾಂಗ ತರಬೇತಿ ಸಂಸ್ಥೆಗೆ ಮೂರು ತಿಂಗಳ ತರಬೇತಿಗಾಗಿ ಕಳುಹಿಸುವಂತೆ ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ. ಕಾನ್ಪುರದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಅಮಿತ್ ವರ್ಮಾ ತರಬೇತಿಗೆ ಕಳುಹಿಸಲ್ಪಟ್ಟ ನ್ಯಾಯಾಧೀಶರಾಗಿದ್ದಾರೆ.

ಕಾನ್ಪುರ ನಗರದ ಮುನ್ನಿ ದೇವಿ ಎಂಬುವವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಮೂರ್ತಿ ನೀರಜ್ ತಿವಾರಿ ಈ ಆದೇಶ ಹೊರಡಿಸಿದ್ದಾರೆ. ಆದರೆ ಬಾಡಿಗೆ ವ್ಯಾಜ್ಯವೊಂದರಲ್ಲಿ ಹೆಚ್ಚುವರಿ ಅಂಶಗಳನ್ನು ಸೇರಿಸಬೇಕು ಎಂಬ ಅರ್ಜಿದಾರರ ಮನವಿಯನ್ನು ತಿರಸ್ಕರಿಸಲಾಗಿದೆ.

ಬಾಡಿಗೆದಾರರ ಪ್ರಕರಣವೊಂದರಲ್ಲಿ ಪ್ರಕರಣದ ಅನುಕೂಲಕರ ಅಂಶಗಳನ್ನು ಪರಿಗಣಿಸದೇ ಮೂರು ಸಾಲಿನ ಆದೇಶದಲ್ಲಿ ತಿದ್ದುಪಡಿ ಅರ್ಜಿಯನ್ನು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಬೇಕಾಬಿಟ್ಟಿಯಾಗಿ ವಜಾ ಮಾಡಿದ್ದಾರೆ ಎಂದು ಅರ್ಜಿದಾರ ಮಹಿಳೆ ಆಪಾದಿಸಿದ್ದರು. ಜತೆಗೆ ಯಾವ ಕಾರಣಕ್ಕೆ ತಿದ್ದುಪಡಿ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂಬುದಕ್ಕೆ ಒಂದು ಸಾಲಿನ ಕಾರಣವನ್ನೂ ನೀಡಿಲ್ಲ ಎಂದು ದೂರಿದ್ದರು. ಈ ಹಿಂದೆಯೂ ಇದೇ ನ್ಯಾಯಾಧೀಶರು ಇಂಥದ್ದೇ ತೀರ್ಪು ನೀಡಿದ್ದಾಗಿ ವಿವರಿಸಿದ್ದರು.

ಈ ದೋಷಪೂರಿತ ಆದೇಶವನ್ನು ಪರಿಶೀಲಿಸಿದ ಹೈಕೋರ್ಟ್, ಏಪ್ರಿಲ್ 22ರಂದು ನೀಡಿದ ತೀರ್ಪಿನಲ್ಲಿ, "ಕಾನ್ಪುರ ನಗರದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿರುವ ಅಮಿತ್ ವರ್ಮಾ ಅವರು ತೀರ್ಪು ಬರೆಯಲು ಅಸಮರ್ಥರು ಎಂಬ ದೃಢ ನಿರ್ಧಾರಕ್ಕೆ ಹೈಕೋರ್ಟ್ ಬಂದಿದೆ. ಆದ್ದರಿಂದ ಅವರನ್ನು ಕನಿಷ್ಠ ಮೂರು ತಿಂಗಳ ತರಬೇತಿಗಾಗಿ ಲಕ್ನೋದಲ್ಲಿರುವ ನ್ಯಾಯಾಂಗ ತರಬೇತಿ ಮತ್ತು ಸಂಶೋಧನಾ ಸಂಸ್ಥೆಗೆ ಕಳುಹಿಸಬೇಕು" ಎಂದು ಆದೇಶಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News