ಬಿಜೆಪಿಯಿಂದ ಕಲ್ಯಾಣ್ ಬ್ಯಾನರ್ಜಿಯ ವಾಟ್ಸ್ ಆ್ಯಪ್ ಚಾಟ್ ಸೋರಿಕೆ: ಕಲ್ಯಾಣ್ ಬ್ಯಾನರ್ಜಿಯಿಂದ ರಾಜೀನಾಮೆ ಬೆದರಿಕೆ

Update: 2025-04-08 21:06 IST
Kalyan Banerjee

ಕಲ್ಯಾಣ್ ಬ್ಯಾನರ್ಜಿ | PC : NDTV  

  • whatsapp icon

ಕೋಲ್ಕತ್ತಾ: ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿರುವ ತಮ್ಮ ಹಾಗೂ ಮತ್ತೊಬ್ಬ ಸಂಸದರ ನಡುವಿನ ಸಂವಾದದ ವಿಡಿಯೊ ತುಣುಕುಗಳನ್ನು ನಾಲ್ಕು ಬಾರಿಯ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಕಲ್ಯಾಣ್ ಬ್ಯಾನರ್ಜಿ ದೃಢಪಡಿಸಿದ್ದಾರೆ.

ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಎಕ್ಸ್ ನಲ್ಲಿ ಕೆಲವು ಸಂವಾದ ಹಾಗೂ ವಿಡಿಯೊ ತುಣುಕುಗಳನ್ನು ಹಂಚಿಕೊಂಡ ಬೆನ್ನಿಗೇ, ಪತ್ರಿಕಾ ಗೋಷ್ಠಿಯೊಂದರಲ್ಲಿ ಪ್ರತಿಕ್ರಿಯಿಸಿರುವ ಸೆರಂಪೋರ್ ಸಂಸದ ಹಾಗೂ ಪಶ್ಚಿಮ ಬಂಗಾಳ ಸರಕಾರವನ್ನು ಹಲವು ಪ್ರಮುಖ ಕಾನೂನು ಪ್ರಕರಣಗಳಲ್ಲಿ ಪ್ರತಿನಿಧಿಸಿರುವ ಕಲ್ಯಾಣ್ ಬ್ಯಾನರ್ಜಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆ ಒಡ್ಡಿದ್ದಾರೆ.

“ಪಕ್ಷ ಹೇಳಿದ ದಿನ ನಾನು ನನ್ನ ಹುದ್ದೆಯಿಂದ ಕೆಳಗಿಳಿಯಲಿದ್ದೇನೆ. ಆದರೆ, ಮಹಿಳಾ ಸಂಸದೆಯೊಬ್ಬರ ಇಂತಹ ದುರಹಂಕಾರದ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ಒಂದು ವೇಳೆ ದೀದಿ (ಮಮತಾ ಬ್ಯಾನರ್ಜಿ) ಹೇಳಿದರೆ, ನಾನು ಕೂಡಲೇ ರಾಜೀನಾಮೆ ಸಲ್ಲಿಸುತ್ತೇನೆ. ಆಕೆ ಸುಂದರವಾಗಿದ್ದಾರೆ ಹಾಗೂ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಾರೆ ಎಂಬ ಒಂದೇ ಕಾರಣಕ್ಕೆ ಆಕೆ ಯಾರನ್ನಾದರೂ ಅವಮಾನಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.

ಆದರೆ, ಸುಂದರ ಹಾಗೂ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವ ಯಾವ ಸಂಸದೆಯ ಕುರಿತು ತಾನು ಉಲ್ಲೇಖಿಸುತ್ತಿದ್ದೇನೆ ಎಂಬುದನ್ನು ಅವರು ಬಹಿರಂಗಗೊಳಿಸಲಿಲ್ಲ.

“ನಾನು ಲೋಕಸಭೆಯ ಒಂದು ಅಧಿವೇಶನಕ್ಕೆ ಗೈರಾಗಿ, ಸದನದ ಕಲಾಪದಲ್ಲಿ ಪಕ್ಷದ ಕಾರ್ಯನಿರ್ವಹಣೆಯನ್ನು ಗಮನಿಸುತ್ತೇನೆ. ಕೇವಲ ಧಿಕ್ಕಾರ ಕೂಗಿದರೆ ಮಾತ್ರ ಸಾಕಾಗುವುದಿಲ್ಲ” ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋಮವಾರ ಅವಕಾಶ ವಂಚಿತ ಶಿಕ್ಷಕರ ಒಕ್ಕೂಟದ ಸದಸ್ಯರನ್ನುದ್ದೇಶಿಸಿ ಮಾತನಾಡಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸರಕಾರಿ ಶಾಲೆಗಳಲ್ಲಿನ ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗಳಿಗಾಗಿ ರಚಿಸಲಾಗಿದ್ದ ಇಡೀ ಸಮಿತಿಯನ್ನು ರದ್ದುಗೊಳಿಸಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಪರಾಮರ್ಶೆ ಅರ್ಜಿ ಸಲ್ಲಿಸಲು ರಾಜ್ಯ ಸರಕಾರ ಆಯ್ಕೆ ಮಾಡಿರುವ ವಕೀಲರ ಸಮಿತಿಯಲ್ಲಿ ಕಲ್ಯಾಣ್ ಬ್ಯಾನರ್ಜಿ ಅವರ ಹೆಸರನ್ನು ಪ್ರಕಟಿಸಿದ್ದರು.

ನಗದಿಗಾಗಿ ಶಾಲಾ ಉದ್ಯೋಗಗಳ ಹಗರಣದ ಕುರಿತು ಕಲ್ಕತ್ತಾ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರಕಾರವು ಸಲ್ಲಿಸಿದ್ದ ಮೇಲ್ಮನವಿ ವಜಾಗೊಂಡ ಶುಕ್ರವಾರದಂದೇ ಈ ಇಬ್ಬರು ಸಂಸದರು ಸಾರ್ವಜನಿಕವಾಗಿ ಪರಸ್ಪರ ವಾಕ್ಸಮರ ನಡೆಸಿದ್ದರು.

ಅಮಿತ್ ಮಾಳವೀಯ ಹಂಚಿಕೊಂಡಿದ್ದ ಘಟನೆಯ ವಿಡಿಯೊ ತುಣುಕು ನಿರ್ವಚನ ಸದನದ ಹೊರಗೆ ನಡೆದಿರುವುದು ಎನ್ನಲಾಗಿದೆ.

ನಕಲಿ ಮತದಾರರ ಚೀಟಿಯ ವಿಷಯವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದರಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರಾದ ಕಲ್ಯಾಣ್ ಬ್ಯಾನರ್ಜಿ ಹಾಗೂ ಡೆರೆಕ್ ಒ’ಬ್ರಿಯಾನ್ ಮುಂಚೂಣಿಯಲ್ಲಿದ್ದರು. ಈ ಕುರಿತು ನೆನಪೋಲೆಯನ್ನು ಸಲ್ಲಿಸಲು ತೃಣಮೂಲ ಕಾಂಗ್ರೆಸ್ ಪಕ್ಷದ ನಿಯೋಗವೊಂದು ಭಾರತೀಯ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿತ್ತು.

ಮಹಿಳಾ ಸಂಸದೆಯು ನಮ್ಮ ನೆನಪೋಲೆಗೆ ಸಹಿಯನ್ನೂ ಮಾಡಲಿಲ್ಲ ಅಥವಾ ಇನ್ನಿತರ ಸಂಸದರೊಂದಿಗೆ ಜೊತೆಗೂಡಲೂ ಇಲ್ಲ. ಬದಲಿಗೆ ತಾವೇ ಖುದ್ದಾಗಿ ನಿರ್ವಚನ ಸದನಕ್ಕೆ ಆಗಮಿಸಿದ್ದರು ಎಂದು ಕಲ್ಯಾಣ್ ಬ್ಯಾನರ್ಜಿ ಆರೋಪಿಸಿದ್ದಾರೆ.

ಮಹಿಳೆಯೊಬ್ಬರೊಂದಿಗೆ ಅವಹೇಳನಕಾರಿಯಾಗಿ ವರ್ತಿಸಿದ ಆರೋಪದ ಮೇಲೆ ಕಲ್ಯಾಣ್ ಬ್ಯಾನರ್ಜಿಯನ್ನು ಬಂಧಿಸುವಂತೆ ಕೇಂದ್ರ ಭದ್ರತಾ ಪಡೆಗಳಿಗೆ ಮಹಿಳಾ ಸಂಸದೆಯು ಸೂಚಿಸಿದ್ದರು ಎಂದು ಆರೋಪಿಸಲಾಗಿದೆ.

“ಆಕೆ ನನ್ನನ್ನು ಹಾಗೂ ನನ್ನ ಪುತ್ರಿಯನ್ನು ಸಂಸತ್ತಿನಲ್ಲಿ ನಿಂದಿಸಿದರು. ನಾನು ವಕ್ಫ್ ಮಸೂದೆಯ ಕುರಿತು ಮಾತನಾಡಿದ್ದರಿಂದ, ಆಕೆ ಅಸಮಾಧಾನಗೊಂಡಿದ್ದಾರೆ. ಆಕೆಗೆ ಸದಾ ಪ್ರಚಾರದಲ್ಲಿರುವುದು ಬೇಕಿದೆ. ನಾನು ಜನಸಾಮಾನ್ಯರ ಪರವಾಗಿ ಮಾತನಾಡಿದರೆ, ಆಕೆ ಒಬ್ಬ ಉದ್ಯಮಿಯ ವಿರುದ್ಧ ವಿರುವ ಮತ್ತೊಬ್ಬ ಉದ್ಯಮಿಯ ಪರವಾಗಿ ಮಾತನಾಡುತ್ತಾರೆ. ಆಕೆ ಕೇವಲ ನರೇಂದ್ರ ಮೋದಿಯ ವಿರುದ್ಧ ದಾಳಿ ನಡೆಸುತ್ತಾರೆ. ಆಕೆಯೆಂದಾದರೂ ಅಮಿತ್ ಶಾ ಅಥವಾ ಇನ್ನಿತರ ಬಿಜೆಪಿ ನಾಯಕರ ವಿರುದ್ಧ ಒಂದಾದರೂ ಮಾತನಾಡಿದ್ದಾರೆಯೆ?” ಎಂದು ಕಲ್ಯಾಣ್ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.

“ನಾನು ಬೇರೆಯವರಂತೆ ತೃಣಮೂಲ ಕಾಂಗ್ರೆಸ್ ಪಕ್ಷದ ಉತ್ಕರ್ಷದ ದಿನಗಳಾದ 2011ರಲ್ಲಿ ಪಕ್ಷವನ್ನು ಸೇರ್ಪಡೆಯಾಗಿಲ್ಲ. ನಾನು ಮೀಸಲಾತಿ ನಾಯಕನಲ್ಲ. ನಾನು ಇನ್ನೊಂದು ಪಕ್ಷದಿಂದ ಬಂದವನಲ್ಲ. ನಾನು ಸಿಪಿಎಂ ವಿರುದ್ಧ ಹೋರಾಡಿದವನು” ಎಂದು ಪರೋಕ್ಷವಾಗಿ ಕೃಷ್ಣಾನಗರ ಲೋಕಸಭಾ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ.

ಸೋರಿಕೆಯಾಗಿರುವ ವಾಟ್ಸ್ ಆ್ಯಪ್ ಚಾಟ್ ನಲ್ಲಿ ಕಲ್ಯಾಣ್ ಬ್ಯಾನರ್ಜಿ ಅವರು ಮಹಿಳಾ ಸಂಸದೆಯನ್ನು ‘ಅಂತಾರಾಷ್ಟ್ರೀಯ ಶ್ರೇಷ್ಠ ಮಹಿಳೆ’ ಎಂದು ವ್ಯಂಗ್ಯವಾಡಿದ್ದಾರೆ.

ಆದರೆ, ಈ ವಾಗ್ಯುದ್ಧ ಹಾಗೂ ಕಲ್ಯಾಣ್ ಬ್ಯಾನರ್ಜಿಯ ಆಕ್ರೋಶದ ಕುರಿತು ಯಾವುದೇ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕನು ಇದುವರೆಗೆ ಪ್ರತಿಕ್ರಿಯಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News