ಒಂದು ರಾಷ್ಟ್ರ ಒಂದು ಚುನಾವಣೆ ‘ಅಪಾಯಕಾರಿ’ : ಕಮಲ್‌ ಹಾಸನ್

Update: 2024-09-21 15:03 GMT

ಕಮಲ್‌ ಹಾಸನ್ |  PC : X  

ಚೆನ್ನೈ : ಒಂದು ರಾಷ್ಟ್ರ,ಒಂದು ಚುನಾವಣೆ ಪ್ರಸ್ತಾವವು ಅಪಾಯಕಾರಿ ಮತ್ತು ದೋಷಪೂರಿತವಾಗಿದೆ, ಅದರ ಕುರುಹುಗಳು ಈಗಲೂ ಕೆಲವು ದೇಶಗಳಲ್ಲಿ ಅಸ್ತಿತ್ವದಲ್ಲಿವೆ. ಹೀಗಾಗಿ ಅದು ಭಾರತಕ್ಕೆ ಅಗತ್ಯವಿಲ್ಲ ಮತ್ತು ಭವಿಷ್ಯದಲ್ಲಿಯೂ ಅಗತ್ಯವಲ್ಲ ಎಂದು ಹಿರಿಯ ನಟ ಹಾಗೂ ಮಕ್ಕಳ್ ನೀಧಿ ಮೈಯಂ ಸ್ಥಾಪಕ ನಾಯಕ ಕಮಲ್‌ ಹಾಸನ್ ಅವರು ಶನಿವಾರ ಇಲ್ಲಿ ಹೇಳಿದರು.

2014 ಅಥವಾ 2015ರಲ್ಲಿ ಏಕಕಾಲಿಕ ಚುನಾವಣೆಗಳು ನಡೆದಿದ್ದರೆ ಅದು ಒಂದು ಪಕ್ಷವು ಪೂರ್ಣ ಮೇಲುಗೈ ಸಾಧಿಸಲು ಕಾರಣವಾಗುತ್ತಿತ್ತು. ಪರಿಣಾಮವಾಗಿ ಸರ್ವಾಧಿಕಾರ, ವಾಕ್ ಸ್ವಾತಂತ್ರ್ಯ ನಷ್ಟ ಮತ್ತು ಒಬ್ಬನೇ ನಾಯಕನ ಪ್ರಾಬಲ್ಯವನ್ನು ದೇಶವು ನೋಡಬೇಕಾಗುತ್ತಿತ್ತು ಎಂದು ಅವರು ಯಾವುದೇ ನಾಯಕ ಅಥವಾ ಪಕ್ಷವನ್ನು ಹೆಸರಿಸದೆ ಹೇಳಿದರು.

ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ‘ನಾವು ಅದರಿಂದ ಪಾರಾಗಿದ್ದೇವೆ ಎನ್ನುವುದನ್ನು ನೀವು ಅರ್ಥ ಮಾಡಿಕೊಳ್ಳಬೇಕು, ನಾವು ಕೊರೋನ ವೈರಸ್‌ಗಿಂತ ಹೆಚ್ಚು ತೀವ್ರವಾದ ಕಾಯಿಲೆಯಿಂದ ಪಾರಾಗಿದ್ದೇವೆ ’ಎಂದರು. ತನ್ಮೂಲಕ, ಸುಮಾರು ಒಂದು ದಶಕದ ಹಿಂದೆ ಒಂದು ರಾಷ್ಟ್ರ ಒಂದು ಚುನಾವಣೆ ಪರಿಕಲ್ಪನೆಯನ್ನು ಅಪ್ಪಿಕೊಳ್ಳದೆ ಚುನಾವಣೆಗಳನ್ನು ನಡೆಸಲಾಗಿತ್ತು ಎನ್ನುವುದನ್ನು ನೆನಪಿಸಿದರು.

ಏಕಕಾಲಿಕ ಚುನಾವಣೆಗಳಿಗೆ ತನ್ನ ಪ್ರತಿಕ್ರಿಯೆ ಸಂದರ್ಭದಲ್ಲಿ ಯುರೋಪ್ ಮತ್ತು ರಷ್ಯವನ್ನು ಕಮಲ್ ಬೆಟ್ಟು ಮಾಡಿದರಾದರೂ, ಅದು ಯಾವ ದೇಶದಲ್ಲಿ ವಿಫಲಗೊಂಡಿತ್ತು ಎನ್ನುವುದನ್ನು ನಿರ್ದಿಷ್ಟವಾಗಿ ಹೇಳಲಿಲ್ಲ.

ಒಂದೇ ಸಮಯದಲ್ಲಿ ಎಲ್ಲ ಸಂಚಾರ ದೀಪಗಳು ಒಂದೇ ಬಣ್ಣದಲ್ಲಿ ಹೊಳೆಯುತ್ತಿದ್ದರೆ ಏನಾಗುತ್ತದೆ ಎಂದು ಪ್ರಶ್ನಿಸಿದ ಅವರು, ಜನರಿಗೆ ಯೋಚಿಸಲು ಮತ್ತು ತಮ್ಮ ಆಯ್ಕೆಯನ್ನು ಆಯ್ದುಕೊಳ್ಳಲು ಸಮಯ ನೀಡಬೇಕಾಗುತ್ತದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News