ತನ್ನ ಕ್ಷೇತ್ರದಿಂದ ಕಪಿಲ್‌ ಮಿಶ್ರಾಗೆ ಟಿಕೆಟ್: ಪಕ್ಷದ ವಿರುದ್ಧ ಕೆಂಡಾಮಂಡಲರಾದ ದಿಲ್ಲಿ ಬಿಜೆಪಿ ಹಿರಿಯ ಶಾಸಕ

Update: 2025-01-12 11:14 GMT

ಕಪಿಲ್‌ ಮಿಶ್ರಾ | PC : PTI 

ಹೊಸದಿಲ್ಲಿ: ತಮ್ಮ ಸ್ಥಾನದಿಂದ ಕಪಿಲ್‌ ಮಿಶ್ರಾ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಿಸಿರುವ ಬಿಜೆಪಿ ನಿರ್ಧಾರವನ್ನು ದಿಲ್ಲಿ ಬಿಜೆಪಿ ಶಾಸಕ ಮೋಹನ್ ಸಿಂಗ್ ಬಿಶ್ತ್ ಟೀಕಿಸಿದ್ದಾರೆ.

ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮೋಹನ್‌ ಸಿಂಗ್‌ ಬಿಶ್ತ್‌, “ಅವರು ದೊಡ್ಡ ತಪ್ಪು ಮಾಡಿದ್ದಾರೆ. ಬಿಜೆಪಿ ಯಾರನ್ನು ಕಣಕ್ಕಿಳಿಸಿದರೂ ಗೆಲ್ಲಬಹುದು ಎಂದು ಭಾವಿಸಿದ್ದಾರೆ. ಬುರಾರಿ, ಕರವಾಲ್ ನಗರ, ಘೋಂಡಾ, ಸೀಲಾಂಪುರ, ಗೋಕಲ್ಪುರಿ ಮತ್ತು ನಂದ್ ನಗರಿ ಸ್ಥಾನಗಳಲ್ಲಿ ಏನಾಗುತ್ತದೆ ಎಂಬುದನ್ನು ಕಾಲವೇ ಹೇಳುತ್ತದೆ” ಎಂದು ಹೇಳಿದ್ದಾರೆ.

“ನಾನು ಬೇರೆ ಯಾವುದೇ ಸ್ಥಾನದಿಂದ ಸ್ಪರ್ಧಿಸುವುದಿಲ್ಲ. ಜನವರಿ 17 ರ ಮೊದಲು ನಾನು ಕರವಾಲ್ ನಗರ ಸ್ಥಾನದಿಂದ ನನ್ನ ನಾಮಪತ್ರ ಸಲ್ಲಿಸುತ್ತೇನೆ” ಎಂದು ಹೇಳಿರುವ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸೂಚನೆಯನ್ನು ನೀಡಿದ್ದಾರೆ.

ಆದರೆ, ಕಪಿಲ್‌ ಮಿಶ್ರಾ ಅವರು ತಮ್ಮ ಗೆಲುವಿನ ಬಗ್ಗೆ ಭರವಸೆಯನ್ನು ವ್ಯಕ್ತಪಡಿಸಿದ್ದು, "ಕರವಾಲ್ ನಗರದ ಜನರು ಉತ್ಸುಕರಾಗಿದ್ದಾರೆ ಮತ್ತು ನಾವು ಇಲ್ಲಿ ದೊಡ್ಡ ಗೆಲುವು ಸಾಧಿಸುತ್ತೇವೆ. ದೆಹಲಿಯಲ್ಲಿ ಪರಿವರ್ತನೆಯ ಅಲೆ ಇದೆ. ಬಿಜೆಪಿ ಇಲ್ಲಿ ಸರ್ಕಾರ ರಚಿಸಲಿದೆ" ಎಂದು ಹೇಳಿದ್ದಾರೆ.

2015 ರ ಚುನಾವಣೆಯಲ್ಲಿ, ಕಪಿಲ್ ಮಿಶ್ರಾ ಅವರು ಕರವಾಲ್ ನಗರ ಸ್ಥಾನದಿಂದ ಎಎಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಬಿಶ್ತ್ ಅವರನ್ನು ಸೋಲಿಸಿದ್ದರು. ಬಳಿಕ ಸಚಿವರಾಗಿಯೂ ಇದ್ದ ಮಿಶ್ರಾ ಅವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಎಎಪಿಯಿಂದ 2017 ರಲ್ಲಿ ಅಮಾನತುಗೊಳಿಸಲಾಯಿತು.

ದೆಹಲಿಯಲ್ಲಿ ಫೆಬ್ರವರಿ 5 ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಫೆಬ್ರವರಿ 8 ರಂದು ಮತಗಳ ಎಣಿಕೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News