ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಕನಿಷ್ಠ 27 ಮಂದಿ ಮೃತ್ಯು
ಶ್ರೀನಗರಕ್ಕೆ ದೌಡಾಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ;

PTI
ಶ್ರೀನಗರ: ಇತ್ತೀಚಿನ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿರುವ ಅತಿ ದೊಡ್ಡ ಭಯೋತ್ಪಾದಕ ದಾಳಿಯಲ್ಲಿ, ಲಷ್ಕರ್-ಇ-ತೊಯ್ಬಾದೊಂದಿಗೆ ಸಂಪರ್ಕ ಹೊಂದಿರುವ ಭಯೋತ್ಪಾದಕರ ಗುಂಡೇಟಿಗೆ ಓರ್ವ ವಿದೇಶಿ ಪ್ರವಾಸಿಗ ಸೇರಿದಂತೆ ಕನಿಷ್ಠ 27 ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಲಷ್ಕರ್-ಇ-ತೊಯ್ಬಾದ ಮುಂಚೂಣಿ ಭಯೋತ್ಪಾದಕ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಮಂಗಳವಾರ ಮಧ್ಯಾಹ್ನ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ, ಮಹಿಳೆಯರು ಹಾಗೂ ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದರು. ಕುದುರೆಯ ಹಿಂಬದಿ ಕುಳಿತುಕೊಂಡು ಪಹಲ್ಗಾಮ್ ನ ಬೈಸರಣ್ ಹುಲ್ಲುಗಾವಲನ್ನು ಆಸ್ವಾದಿಸುತ್ತಿದ್ದ ಪ್ರವಾಸಿಗರ ಮೇಲೆ ಸೇನಾ ಸಮವಸ್ತ್ರ ಧರಿಸಿಕೊಂಡು ಮುನ್ನುಗ್ಗಿದ ಮೂವರು ವ್ಯಕ್ತಿಗಳು ಮನಬಂದಂತೆ ಗುಂಡಿನ ದಾಳಿ ನಡೆಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೆ, ಸ್ಥಳಕ್ಕೆ ಭದ್ರತಾ ಪಡೆಗಳನ್ನು ರವಾನಿಸಲಾಗಿದ್ದು, ಹಂತಕರನ್ನು ಹೊಡೆದುರುಳಿಸಲು ಭಾರಿ ಪ್ರಮಾಣದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ. ಈ ಭಯೋತ್ಪಾದಕ ದಾಳಿಯ ನಂತರ, ವೈರಲ್ ಆಗಿರುವ ವೀಡಿಯೊದಲ್ಲಿ, ನಿರ್ಜೀವಗೊಂಡು, ರಕ್ತಸಿಕ್ತವಾಗಿ ನೆಲದ ಮೇಲೆ ಜನರು ಬಿದ್ದುಕೊಂಡಿದ್ದು, ಮಹಿಳೆಯರು ದಿಕ್ಕುತೋಚದಂತೆ ತಮ್ಮ ಪ್ರೀತಿಪಾತ್ರರ ದೇಹಗಳಿಗಾಗಿ ಹುಡುಕಾಡುತ್ತಿರುವುದು ಸೆರೆಯಾಗಿದೆ.
ಈ ಭಯೋತ್ಪಾದಕ ದಾಳಿಯನ್ನು ಖಂಡಿಸಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, “ಇದು ಹೇಯ ಕೃತ್ಯವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತ ಸಂಖ್ಯೆಯ ವಿವರಗಳ ಕುರಿತು ಇನ್ನೂ ಪರಿಶೀಲಿಸಲಾಗುತ್ತಿದ್ದು, ನಾವು ಕಂಡಂತೆ, ಇತ್ತೀಚಿನ ವರ್ಷಗಳಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆದಿರುವ ಬೃಹತ್ ದಾಳಿ ಇದಾಗಿದೆ” ಎಂದು ಅವರು ತಿಳಿಸಿದ್ದಾರೆ.
ಸದ್ಯ ಸೌದಿ ಅರೇಬಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಜಮ್ಮು ಮತ್ತು ಕಾಶ್ಮೀರದಲ್ಲಿನ ಹಾಲಿ ಸ್ಥಿತಿಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ದೂರವಾಣಿ ಕರೆಯ ಮೂಲಕ ಮಾಹಿತಿ ಪಡೆದರು.
“ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದಿರುವ ಭಯೋತ್ಪಾದಕ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ತಮ್ಮ ಪ್ರೀತಿ ಪಾತ್ರವನ್ನು ಕಳೆದುಕೊಂಡಿರುವವರಿಗೆ ನನ್ನ ಸಂತಾಪಗಳು. ದಾಳಿಯಲ್ಲಿ ಗಾಯಗೊಂಡಿರುವವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಈ ದಾಳಿಯಿಂದ ಬಾಧಿತರಾಗಿರುವವರಿಗೆ ಸಾಧ್ಯವಿರುವ ಎಲ್ಲ ನೆರವನ್ನೂ ಒದಗಿಸಲಾಗುವುದು. ಈ ಹೇಯ ಕೃತ್ಯದ ಹಿಂದಿರುವವರನ್ನು ಕಾನೂನಿನ ಶಿಕ್ಷೆಗೊಳಪಡಿಸಲಾಗುವುದು. ಅವರನ್ನು ಸುಮ್ಮನೆ ಬಿಡುವುದಿಲ್ಲ” ಎಂದು ತಮ್ಮ ಸಂದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಶಪಥ ಮಾಡಿದ್ದಾರೆ.