“ಕಾಶ್ಮೀರಿ ಟ್ಯಾಕ್ಸಿ ಚಾಲಕರು ಸಹೋದರರಂತೆ ನನ್ನನ್ನು ನೋಡಿಕೊಂಡರು”: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರ ಪುತ್ರಿಯ ಹೇಳಿಕೆ

Update: 2025-04-24 22:04 IST
Aarti Menon

ಆರತಿ ಆರ್.ಮೆನನ್ | Photo: TNM.\ thewire.in

  • whatsapp icon

ಹೊಸದಿಲ್ಲಿ: “ಮಂಗಳವಾರ ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ದಾಳಿ ನಡೆದ ನಂತರ, ಕಾಶ್ಮೀರಿ ಟ್ಯಾಕ್ಸಿ ಚಾಲಕರಾದ ಮುಸಾಫಿರ್ ಹಾಗೂ ಸಮೀರ್ ಅವರು ನನ್ನನ್ನು ಸ್ವಂತ ಸಹೋದರರಂತೆ ನೊಡಿಕೊಂಡರು” ಎಂದು ಈ ಘಟನೆಯಲ್ಲಿ ಮೃತಪಟ್ಟ ಕೊಚ್ಚಿ ನಿವಾಸಿ ಎನ್.ರಾಮಚಂದ್ರನ್ ಅವರ ಪುತ್ರಿ ಆರತಿ ಆರ್.ಮೆನನ್ ತಿಳಿಸಿದ್ದಾರೆ.

ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ಎನ್.ರಾಮಚಂದ್ರನ್ ಅವರ ಪಾರ್ಥಿವ ಶರೀರವನ್ನು ಕೊಚ್ಚಿಗೆ ತಂದ ನಂತರ, ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಆರತಿ ಆರ್. ಮೆನನ್, ನಮಗದು ಭಯೋತ್ಪಾದಕ ದಾಳಿ ಎಂದು ಅರ್ಥವಾಗುತ್ತಿದ್ದಂತೆಯೇ ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದೆವು. ಅಂದು ನಾವು ಮಧ್ಯಾಹ್ನ ಸುಮಾರು 2.10ರ ವೇಳೆಗೆ ಅಲ್ಲಿಗೆ ತಲುಪಿದ್ದೆವು. ನಂತರ, ಕೇವಲ 10 ನಿಮಿಷಗಳಲ್ಲಿ ಆ ಭಯೋತ್ಪಾದನಾ ದಾಳಿ ನಡೆಯಿತು. ನಮ್ಮ ಮೇಲೆ ದಾಳಿ ನಡೆಸಿದ ವ್ಯಕ್ತಿ ಸಾದಾ ಉಡುಗೆಗಳನ್ನು ಧರಿಸಿದ್ದ” ಎಂದು ಹೇಳಿದ್ದಾರೆ.

“ಭಯೋತ್ಪಾದಕನೊಬ್ಬ ಗುಂಡಿನ ದಾಳಿ ನಡೆಸಲು ಪ್ರಾರಂಭಿಸುತ್ತಿದ್ದಂತೆಯೆ, ಭೀತಿಯಿಂದ ಎಲ್ಲರೂ ಹೆಪ್ಪುಗಟ್ಟಿ ಹೋದರು. ಆತ ನಮ್ಮನ್ನು ನೆಲದ ಮೇಲೆ ಮಲಗುವಂತೆ ಸೂಚಿಸಿದ. ನಮ್ಮನ್ನು ಸಮೀಪಿಸಿದ ಆತ, ‘ಕಲೀಮಾ’ ಎಂದು ಕೇಳಿಸಿದ ಶಬ್ದವನ್ನು ಎರಡು ಬಾರಿ ಉಚ್ಚರಿಸಿದ. ನಮಗದು ಅರ್ಥವಾಗಲಿಲ್ಲ ಎಂದು ನಾವು ಹೇಳಿದಾಗ, ಆತ ನನ್ನ ತಂದೆಗೆ ಗುಂಡು ಹೊಡೆದ. ನಾನು ಅವರನ್ನು ತಬ್ಬಿಕೊಂಡಾಗ, ಆತ ನನ್ನ ತಲೆಗೆ ಬಂದೂಕನ್ನು ತಿವಿದ. ಅದು ನನಗೆ ಗುಂಡು ಹೊಡೆಯಲೊ ಅಥವಾ ನನ್ನನ್ನು ಹೆದರಿಸಲೊ ಎಂಬುದು ನನಗೆ ತಿಳಿದಿಲ್ಲ. ಈ ದೃಶ್ಯವನ್ನು ಕಂಡು ನನ್ನ ಅವಳಿ ಮಕ್ಕಳು ಕಿರುಚಿಕೊಂಡಾಗ, ಆತ ಅಲ್ಲಿಂದ ತೆರಳಿದ” ಎಂದು ಆರತಿ ಆರ್. ಮೆನನ್ ಸ್ಮರಿಸಿದ್ದಾರೆ.

ಸೋಮವಾರ ಪೆಹಲ್ಗಾಮ್ ನ ಬೈಸರಣ್ ಕಣಿವೆಯಲ್ಲಿ ಚಾರಣಕ್ಕೆಂದು ತೆರಳಿದ್ದಾಗ, ಆರತಿ ಆರ್. ಮೆನನ್ ಕುಟುಂಬ ಈ ದುರಂತಮಯ ಘಟನೆಯನ್ನು ಎದುರುಗೊಂಡಿತ್ತು.

ರಾಮಚಂದ್ರನ್ ಅವರು ತಮ್ಮ ಪತ್ನಿ ಶೀಲಾ, ಪುತ್ರಿ ಆರತಿ ಹಾಗೂ ಆಕೆಯ ಇಬ್ಬರು ಪುತ್ರರೊಂದಿಗೆ ಪಹಲ್ಗಾಮ್ ಗೆ ತೆರಳಿದ್ದರು. ಆದರೆ, ಭಯೋತ್ಪಾದಕ ದಾಳಿ ನಡೆದಾಗ, ರಾಮಚಂದ್ರನ್ ಅವರ ಪತ್ನಿ ಶೀಲಾ ಅವರೊಂದಿಗಿರಲಿಲ್ಲ. ತಮ್ಮ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅರ್ಥವಾಗುತ್ತಿದ್ದಂತೆಯೆ, ಆರತಿ ಅವರು ತಮ್ಮ ತಮ್ಮ ಇಬ್ಬರು ಪುತ್ರರೊಂದಿಗೆ ಮೊಬೈಲ್ ಫೋನ್ ಗೆ ಸಿಗ್ನಲ್ ದೊರೆಯುವವರೆಗೂ ಬಹುತೇಕ ಒಂದು ಗಂಟೆ ಓಡಿದ್ದಾರೆ. ನಂತರ, ಕಾಶ್ಮೀರಿ ನಿವಾಸಿಯಾದ ತಮ್ಮ ಚಾಲಕ ಮುಸಾಫಿರ್ ಗೆ ಕರೆ ಮಾಡಿ, ಆತನ ನೆರವು ಕೋರಿದ್ದಾರೆ.

“ನಾನು ಬುಧವಾರ ಮುಂಜಾನೆ 3 ಗಂಟೆಯವರೆಗೆ ಶವಾಗಾರದ ಬಳಿ ಕಾದೆ. 6 ಗಂಟೆಗೆ ಮತ್ತೆ ಅಲ್ಲಿಗೆ ಮರಳಿದೆ. ಈ ಅವಧಿಯಲ್ಲಿ ಕಾಶ್ಮೀರಿ ಟ್ಯಾಕ್ಸಿ ಚಾಲಕರಾದ ಮುಸಾಫಿರ್ ಹಾಗೂ ಸಮೀರ್ ಅವರು ನಾನು ಅವರ ಸ್ವಂತ ಸಹೋದರಿ ಎಂಬಂತೆ ನನಗೆ ಜೊತೆ ನೀಡಿದರು. ನಂತರ, ಕಾಶ್ಮೀರದಿಂದ ನನಗೆ ಇಬ್ಬರು ಸಹೋದರರು ದೊರೆತರು ಎಂದು ನಾನವರಿಗೆ ವಿಮಾನ ನಿಲ್ದಾಣದಲ್ಲಿ ಹೇಳಿದೆ. ಅಲ್ಲಾಹ್ ನಿಮ್ಮನ್ನು ರಕ್ಷಿಸಲಿದ್ದಾನೆ ಎಂದೂ ತಿಳಿಸಿದೆ” ಎಂದು ಆರತಿ ಆರ್. ಮೆನನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆರತಿ ಆರ್. ಮೆನನ್ ಅವರ ಕುಟುಂಬವು ಕೊಚ್ಚಿಗೆ ಮರಳಿದ ನಂತರವಷ್ಟೆ, ರಾಮಚಂದ್ರನ್ ಅವರ ಪತ್ನಿಗೆ ಅವರ ಪತಿಯ ಸಾವಿನ ಬಗ್ಗೆ ಮಾಹಿತಿ ನೀಡಲಾಯಿತು. ಬಿಜೆಪಿ ಬೆಂಬಲಿಗರಾದ ರಾಮಚಂದ್ರನ್ ಅವರು 1992ರಲ್ಲಿ ಎರ್ನಾಕುಲಂ ಜಿಲ್ಲಾ ಮಂಡಳಿ ಚುನಾವಣೆಗೆ ಸ್ಪರ್ಧಿಸಿದ್ದರು.

ಸಾರ್ವಜನಿಕರ ಗೌರವ ಸಲ್ಲಿಕೆಗಾಗಿ ಶುಕ್ರವಾರ ಬೆಳಗ್ಗೆ 7.30ರಿಂದ 9.30ರವರೆಗೆ ಎಡಪಳ್ಳಿಯ ಚಂಗಂಪುಳ ಉದ್ಯಾನವನದಲ್ಲಿ ರಾಮಚಂದ್ರನ್ ಅವರ ಪಾರ್ಥಿವ ಶರೀರವನ್ನು ಇರಿಸಲಾಗುತ್ತದೆ. ನಂತರ, ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಅಂದು ಮಧ್ಯಾಹ್ನ 12 ಗಂಟೆಗೆ ಸಂತಿಕಾವದಮ್ ನಲ್ಲಿ ನೆರವೇರಿಸಲಾಗುತ್ತದೆ.

ಸೌಜನ್ಯ: thenewsminute.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News