ಗೃಹಬಂಧನದಲ್ಲಿಡಲಾಗಿತ್ತು: ಮೆಹಬೂಬಾ ಮುಫ್ತಿ, ಉಮರ್ ಅಬ್ದುಲ್ಲಾ ಆರೋಪ
ಶ್ರೀನಗರ: ಸಂವಿಧಾನದ 370ನೇ ವಿಧಿ ರದ್ದತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತ ತೀರ್ಪನ್ನು ಸೋಮವಾರ ಸುಪ್ರೀಂ ಕೋರ್ಟ್ ಪ್ರಕಟಿಸುವ ಮುನ್ನ, ಪೊಲೀಸರು ನಮ್ಮನ್ನು ‘‘ಗೃಹ ಬಂಧನ’’ದಲ್ಲಿರಿಸಿದ್ದರು ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ (ಪಿಡಿಪಿ)ದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮತ್ತು ನ್ಯಾಶನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ ಆರೋಪಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370ನೇ ವಿಧಿಯನ್ನು 2019ರಲ್ಲಿ ರದ್ದುಪಡಿಸಿರುವ ಕೇಂದ್ರ ಸರಕಾರದ ಕ್ರಮ ಸರಿಯಾಗಿಯೇ ಇದೆ ಎಂಬುದಾಗಿ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ತೀರ್ಪಿನ ಘೋಷಣೆಗೆ ಮುನ್ನ ಪೊಲೀಸರು ಮುಫ್ತಿಯ ನಿವಾಸದ ಬಾಗಿಲುಗಳಿಗೆ ಬೀಗಹಾಕಿದರು ಎಂದು ಅವರ ಪಕ್ಷ ಪಿಡಿಪಿ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಆರೋಪಿಸಿದೆ.
ಅದೇ ವೇಳೆ, ಉಮರ್ ಅಬ್ದುಲ್ಲಾರನ್ನು ಅವರ ಮನೆಯಲ್ಲಿ ಕೂಡಿ ಹಾಕಲಾಗಿತ್ತು ಎಂದು ನ್ಯಾಶನಲ್ ಕಾನ್ಫರೆನ್ಸ್ ಕೂಡ ‘ಎಕ್ಸ್’ನಲ್ಲಿ ಹೇಳಿಕೊಂಡಿದೆ.
‘‘ಇಂದು ಮುಂಜಾನೆ, ಜೆಕೆಎನ್ಸಿ ಉಪಾಧ್ಯಕ್ಷ ಉಮರ್ ಅಬ್ದುಲ್ಲಾರನ್ನು ಅವರ ನಿವಾಸದ ಒಳಗೆ ಕೂಡಿ ಹಾಕಲಾಗಿತ್ತು. ಎಂಥಾ ನಾಚಿಕೆಗೇಡು!’’ ಎಂದು ಪಕ್ಷ ಹೇಳಿದೆ.
ಆದರೆ, ಈ ಆರೋಪಗಳನ್ನು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ನಿರಾಕರಿಸಿದ್ದಾರೆ.
‘‘ಈ ಆರೋಪಗಳು ಸಂಪೂರ್ಣ ಆಧಾರರಹಿತ. ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯ ಕಾರಣಗಳಿಗಾಗಿ ಯಾರನ್ನೂ ಗೃಹಬಂಧನದಲ್ಲಿಡಲಾಗಿಲ್ಲ ಅಥವಾ ಬಂಧಿಸಲಾಗಿಲ್ಲ. ಇದು ಊಹಾಪೋಹಗಳನ್ನು ಹರಡುವ ಪ್ರಯತ್ನವಾಗಿದೆ’’ ಎಂದು ಅವರು ಹೇಳಿಕೊಂಡಿದ್ದಾರೆ.