ಕೇರಳ | ಸಾವಿನಂಚಿನಲ್ಲಿದ್ದ ರೋಗಿಯ ಅಂತಿಮ ಆಸೆ ಪೂರೈಸಲು 3,000 ಕಿಮೀ ಪ್ರಯಾಣಿಸಿದ ಆ್ಯಂಬುಲೆನ್ಸ್ ಚಾಲಕ

Update: 2024-05-10 17:42 GMT

ಆ್ಯಂಬುಲೆನ್ಸ್ ಚಾಲಕ ಅರುಣ್ ಕುಮಾರ್ PC : thenewsminute

ಕೊಲ್ಲಂ (ಕೇರಳ): ಕೋಮಾ ಸ್ಥಿತಿಗೆ ಜಾರಿದ್ದ 60 ವರ್ಷದ ರೋಗಿಯೊಬ್ಬರ ಕೊನೆಯ ಆಸೆಯನ್ನು ಪೂರೈಸಲು 28 ವರ್ಷದ ಆ್ಯಂಬುಲೆನ್ಸ್ ಚಾಲಕ ಅರುಣ್ ಕುಮಾರ್ ಕೇರಳದಿಂದ ಸುಮಾರು 3,000 ಕಿಮೀ ದೂರ ಪ್ರಯಾಣಿಸಿರುವ ಘಟನೆ ವರದಿಯಾಗಿದೆ.

ರೋಗಿ ಬೋಧಿನಿ ಭಹನ್ ಹಾಗೂ ಅವರ ಪುತ್ರ ಸೌತೀಶ್ ಹಾಗೂ ಆತನ ಕುಟುಂಬದೊಂದಿಗೆ ಎಪ್ರಿಲ್ 22ರಂದು ಕೇರಳದ ಕೊಲ್ಲಂನಿಂದ ಪ್ರಯಾಣ ಪ್ರಾರಂಭಿಸಿದ ಚಾಲಕ ಅರುಣ್, ಕೇವಲ ಎರಡೂವರೆ ದಿನಗಳಲ್ಲಿ ಪಶ್ಚಿಮ ಬಂಗಾಳದ ರಾಯ್ ಗಂಜ್ ಗೆ ತಲುಪಿದ್ದಾರೆ.

ಕೇರಳದಿಂದ 2,766 ಕಿಮೀ ದೂರದಲ್ಲಿರುವ ಪಶ್ಚಿಮ ಬಂಗಾಳದಲ್ಲಿನ ತಮ್ಮ ತವರು ಪಟ್ಟಣಕ್ಕೆ ತಾವು ಕೊನೆಯುಸಿರೆಳೆಯುವ ಮುನ್ನ ಭೇಟಿ ನೀಡಲು ಬೋಧಿನಿ ಭಹನ್ ಬಯಸಿದ್ದರು. ಆದರೆ, ಅವರ ಬಳಿ ಅದನ್ನು ಭರಿಸಲು ಬೇಕಾದಷ್ಟು ಆರ್ಥಿಕ ಚೈತನ್ಯವಿರಲಿಲ್ಲ. ಕೊಲ್ಲಂನ ಮೈನಾಗಪಳ್ಳಿಯಲ್ಲಿನ ಇಟ್ಟಿಗೆ ಕಾರ್ಖಾನೆಯೊಂದರಲ್ಲಿ ದುಡಿಯುತ್ತಿರುವ ಅವರ ಪುತ್ರ ಸೌತೀಶ್ ಗೆ ಈ ಬಯಕೆ ತಿಳಿದು, ಅವರು ಅದನ್ನು ಪೂರೈಸಲು ಮುಂದಾಗಿದ್ದಾರೆ.

ಅವರ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ತಿಳಿದ ಅರುಣ್, ಅವರಿಗೆ ನೆರವು ನೀಡಲು ನಿರ್ಧರಿಸಿದ್ದಾರೆ ಹಾಗೂ ಎರಡು ಕಂತಿನಲ್ಲಿ ಹಣವನ್ನು ಸ್ವೀಕರಿಸಲು ಸಿದ್ಧರಾಗಿದ್ದಾರೆ. ಇತರೆ ಆ್ಯಂಬುಲೆನ್ಸ್ ಚಾಲಕರು ಕನಿಷ್ಠ ಪಕ್ಷ ಎರಡು ಲಕ್ಷ ರೂ.ಗೆ ಬೇಡಿಕೆ ಇಟ್ಟರೆ, ಅವರನ್ನು ರಾಯ್ ಗಂಜ್ ಗೆ 90,000 ರೂ.ಗೆ ಕರೆದೊಯ್ಯಲು ಅರುಣ್ ಸಮ್ಮತಿಸಿದ್ದಾರೆ.

“ಆ ಕುಟುಂಬಕ್ಕೆ ವಿಮಾನ ಟಿಕೆಟ್ ಶುಲ್ಕವನ್ನು ಭರಿಸಲು ಸಾಧ್ಯವಿಲ್ಲದಿದ್ದುರಿಂದ, ಅವರು ಪರ್ಯಾಯ ಆಯ್ಕೆಯ ಹುಡುಕಾಟ ಪ್ರಾರಂಭಿಸಿದರು. ರೈಲಿನಲ್ಲಿ ಎರಡು ದಿನಗಳ ಕಾಲ ಪ್ರಯಾಣಿಸುವುದು ಬೋಧಿನಿ ಪಾಲಿಗೆ ಪ್ರಯಾಸಕರವಾಗಿತ್ತು. ಹೀಗಾಗಿ ಅವರು ಆ್ಯಂಬುಲೆನ್ಸ್ ಸೇವೆಗಾಗಿ ಹುಡುಕಾಟ ನಡೆಸತೊಡಗಿದರು. ಇತರ ಆ್ಯಂಬುಲೆನ್ಸ್ ಚಾಲಕರು ದುಬಾರಿ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದರಿಂದ ಸೌತೀಶ್ ಗೆ ಅಷ್ಟು ಮೊತ್ತವನ್ನು ಅವರಿಗೆ ಪಾವತಿಸಲು ಸಾಧ್ಯವಾಗಲಿಲ್ಲ. ಹೀಗಿದ್ದೂ, ಆತ ತನ್ನ ತಾಯಿಯನ್ನು ಆಕೆಯ ತವರಿಗೆ ಕರೆದೊಯ್ಯುವ ಬಗ್ಗೆ ಆಶಾವಾದದಿಂದಿದ್ದ” ಎಂದು The News Minute ಸುದ್ದಿ ಸಂಸ್ಥೆಗೆ ಅರುಣ್ ತಿಳಿಸಿದ್ದಾರೆ.

ನಾನು ವಾಹನವನ್ನು ಪೆಟ್ರೋಲ್ ಬಂಕ್ ಗಳ ಬಳಿ ಹಾಗೂ ಊಟದ ವಿರಾಮಕ್ಕಾಗಿ ಮಾತ್ರ ನಿಲ್ಲಿಸಿದೆ ಹಾಗೂ ಯಾವುದೇ ಸಮಯವನ್ನು ವ್ಯರ್ಥ ಮಾಡಲಿಲ್ಲ ಎಂದು ಅವರು ಹೇಳಿದ್ದಾರೆ.

ಎಮಿರೇಟ್ಸ್ ಆ್ಯಂಬುಲೆನ್ಸ್ ಸರ್ವಿಸ್ ಮೂಲಕ ಅರುಣ್ ರೊಂದಿಗೆ ಸಂಪರ್ಕಕ್ಕೆ ಬಂದಿರುವ ಸೌತೀಶ್, ಆರಂಭದಲ್ಲಿ ರೂ. 40,000 ನೀಡುವುದಾಗಿಯೂ, ಉಳಿದ ಮೊತ್ತವನ್ನು ನಂತರ ನೀಡುವುದಾಗಿಯೂ ಆಶ್ವಾಸನೆ ನೀಡಿದ್ದರು. ಬೋಧಿನಿ, ಸೌತೀಶ್, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಎಪ್ರಿಲ್ 22ರ ಬೆಳಗ್ಗೆ ಮೈನಾಗಪಳ್ಳಿಯಿಂದ ಪ್ರಯಾಣ ಪ್ರಾರಂಭಿಸಿದ ಅರುಣ್, ಎಪ್ರಿಲ್ 24ರ ಸಂಜೆ ವೇಳೆಗೆ ರಾಯ್ ಗಂಜ್ ತಲುಪಿದ್ದರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News