‘ಎಂಪುರಾನ್’ ವಿವಾದ | ಸತ್ಯವನ್ನು ತಿರುಚಿದ ಚಿತ್ರವನ್ನು ವೀಕ್ಷಿಸುವುದಿಲ್ಲ ಎಂದ ಕೇರಳ ಬಿಜೆಪಿ ಮುಖ್ಯಸ್ಥ ರಾಜೀವ್ ಚಂದ್ರಶೇಖರ್

Update: 2025-03-30 13:26 IST
‘ಎಂಪುರಾನ್’ ವಿವಾದ | ಸತ್ಯವನ್ನು ತಿರುಚಿದ ಚಿತ್ರವನ್ನು ವೀಕ್ಷಿಸುವುದಿಲ್ಲ ಎಂದ ಕೇರಳ ಬಿಜೆಪಿ ಮುಖ್ಯಸ್ಥ ರಾಜೀವ್ ಚಂದ್ರಶೇಖರ್

ಕೇರಳ ಬಿಜೆಪಿ ಮುಖ್ಯಸ್ಥ ರಾಜೀವ್ ಚಂದ್ರಶೇಖರ್ (PTI)

  • whatsapp icon

ತಿರುವನಂತಪುರಂ: ಕತೆಯೊಂದನ್ನು ಸೃಷ್ಟಿಸಲು ವಾಸ್ತವಗಳನ್ನು ತಿರುಚಿರುವ ಮೋಹನ್ ಲಾಲ್ ನಟನೆಯ ‘ಎಲ್2: ಎಂಪುರಾನ್’ ಚಿತ್ರ ವಿಫಲಗೊಳ್ಳಲಿದ್ದು, ನಾನು ಆ ಚಿತ್ರವನ್ನು ವೀಕ್ಷಿಸುವುದಿಲ್ಲ ಎಂದು ರವಿವಾರ ಕೇರಳ ಬಿಜೆಪಿ ಮುಖ್ಯಸ್ಥ ರಾಜೀವ್ ಚಂದ್ರಶೇಖರ್ ಘೋಷಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಜೀವ್ ಚಂದ್ರಶೇಖರ್, ಇಂತಹ ಚಿತ್ರ ನಿರ್ಮಾಣದ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ನಾನು ‘ಲೂಸಿಫರ್’ ಚಿತ್ರವನ್ನು ನೋಡಿ, ಆ ಚಿತ್ರವನ್ನು ಇಷ್ಟಪಟ್ಟಿದ್ದೆ. ‘ಎಂಪುರಾನ್’ ಚಿತ್ರವು ‘ಲೂಸಿಫರ್’ ಚಿತ್ರದ ಎರಡನೆ ಭಾಗ ಎಂದು ಕೇಳಿದಾಗ, ನಾನು ಆ ಚಿತ್ರವನ್ನು ನೋಡುತ್ತೇನೆ ಎಂದು ಹೇಳಿದ್ದೆ” ಎಂದು ಅವರು ಬರೆದುಕೊಂಡಿದ್ದಾರೆ.

‘ಎಂಪುರಾನ್’ ಚಿತ್ರ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಆರೋಪಿಸಿ, ಸಂಘ ಪರಿವಾರದ ನಾಯಕರು ಹಾಗೂ ಇತರ ಹಿಂದೂ ಬಲಪಂಥೀಯ ಗುಂಪುಗಳು ಚಿತ್ರದ ಕೆಲ ಭಾಗಗಳ ವಿರುದ್ಧ ತಮ್ಮ ಟೀಕೆಯನ್ನು ತೀವ್ರಗೊಳಿಸಿರುವ ಬೆನ್ನಿಗೇ, ರಾಜೀವ್ ಚಂದ್ರಶೇಖರ್ ರಿಂದ ಈ ಹೇಳಿಕೆ ಹೊರ ಬಿದ್ದಿದೆ.

ಇದಕ್ಕೂ ಮುನ್ನ, ಚಲನಚಿತ್ರಗಳನ್ನು ಕೇವಲ ಮನರಂಜನೆಯನ್ನಾಗಿ ಮಾತ್ರ ನೋಡಬೇಕು ಎಂಬ ಬಿಜೆಪಿ ನಾಯಕ ಎಂ.ಟಿ.ರಮೇಶ್ ಅವರ ಅನಿಸಿಕೆಯನ್ನು ರಾಜೀವ್ ಚಂದ್ರಶೇಖರ್ ಬೆಂಬಲಿಸಿದ್ದರು. ಆದರೆ, ಅವರು ತಮ್ಮ ಇತ್ತೀಚಿನ ಪೋಸ್ಟ್ ನಲ್ಲಿ ‘ಎಂಪುರಾನ್’ ಚಿತ್ರ ತಂಡ 17 ತಿದ್ದುಪಡಿಗಳನ್ನು ಮಾಡಿದ್ದು, ಚಿತ್ರವು ಮರು ಸೆನ್ಸಾರ್ ಗೆ ಒಳಗಾಗುತ್ತಿದೆ ಎಂದು ಉಲ್ಲೇಖಿಸಿದ್ದಾರೆ.

ಇದೇ ವೇಳೆ ‘ಎಂಪುರಾನ್’ ಚಿತ್ರದ ಕೆಲವು ಸಂಗತಿಗಳು ಮೋಹನ್ ಲಾಲ್ ಅಭಿಮಾನಿಗಳಿಗೆ ಹಾಗೂ ಇತರ ಪ್ರೇಕ್ಷಕರಿಗೆ ಮುಜುಗರವನ್ನುಂಟು ಮಾಡಿದೆ ಎಂಬುದನ್ನೂ ಅವರು ಒಪ್ಪಿಕೊಂಡಿದ್ದಾರೆ.

“ಚಿತ್ರವೊಂದನ್ನು ಚಿತ್ರವನ್ನಾಗಿಯೇ ನೋಡಬೇಕು. ಅದನ್ನು ಇತಿಹಾಸವನ್ನಾಗಿ ನೋಡಲು ಸಾಧ್ಯವಿಲ್ಲ” ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.

“ಅಲ್ಲದೆ, ಯಾವುದೇ ಚಿತ್ರ ವಾಸ್ತವಗಳನ್ನು ತಿರುಚಿ ಕತೆಯೊಂದನ್ನು ಸೃಷ್ಟಿಸಿದರೆ, ಅಂತಹ ಚಲನಚಿತ್ರ ಸಹಜವಾಗಿಯೇ ವಿಫಲಗೊಳ್ಳಲಿದೆ. ಹಾಗಾದರೆ, ನಾನು ‘ಲೂಸಿಫರ್’ ಚಿತ್ರದ ಈ ಎರಡನೆ ಭಾಗವನ್ನು ನೋಡುತ್ತೇನೆಯೆ? ಇಲ್ಲ. ಚಿತ್ರ ನಿರ್ಮಾಣದ ಶೈಲಿಯಿಂದ ನಾನು ಅಸಮಾಧಾನಗೊಂಡಿದ್ದೇನೆಯೆ? ಹೌದು” ಎಂದೂ ಅವರು ಬರೆದುಕೊಂಡಿದ್ದಾರೆ.

ಈ ನಡುವೆ, ಚಿತ್ರ ತಂಡಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಹಾಗೂ ಕೇರಳ ವಿಧಾನಸಭೆಯ ವಿಪಕ್ಷ ನಾಯಕ ವಿ.ಡಿ.ಸತೀಶನ್, ಸಂಘ ಪರಿವಾರವು ಇತಿಹಾಸವನ್ನು ತಿರುಚುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ತಮಗೆ ಅನುಕೂಲಕರವಾದ ಸಂಗತಿಗಳು ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಸಂಘ ಪರಿವಾರದ ನಂಬಿಕೆಯಾಗಿದೆ. ಇಂತಹ ದೋಷಪೂರಿತ ಕೆಲಸಗಳನ್ನು ಪ್ರಚಾರ ಮಾಡುವುದೇ ಅವರ ಕಾರ್ಯಸೂಚಿಯಾಗಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News