ಕೇರಳ ಹೈಕೋರ್ಟ್‌ನಿಂದ ಜಾಮೀನು ನಿರಾಕರಣೆ | ನಟ ಸಿದ್ದೀಕ್ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ
ತಿರುವನಂತಪುರ : ಮಲಯಾಳಂ ನಟ ಸಿದ್ದೀಕ್ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಉಚ್ಛ ನ್ಯಾಯಾಲಯವು ಮಂಗಳವಾರ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಕೇರಳ ಪೋಲಿಸರು ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ.
ನಿರೀಕ್ಷಣಾ ಜಾಮೀನು ನಿರಾಕರಣೆಯ ಬಳಿಕ ಸಿದ್ದೀಕ್ ತಲೆಮರೆಸಿಕೊಂಡಿದ್ದಾರೆ. ಸಿದ್ದೀಕ್ ವಿರುದ್ಧ ಕಳೆದ ತಿಂಗಳೇ ಪ್ರಕರಣ ದಾಖಲಾಗಿದ್ದರೂ ಇತ್ತೀಚಿನವರೆಗೂ ಅವರನ್ನು ಬಂಧಿಸಲು ಪೋಲಿಸರು ಮುಂದಾಗಿರಲಿಲ್ಲ.
ಮಹಿಳೆಯೋರ್ವರ ದೂರಿನ ಮೇರೆಗೆ ಸಿದ್ದೀಕ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. 2016ರಲ್ಲಿ ತಿರುವನಂತಪುರದ ಹೋಟೆಲ್‌ವೊಂದರಲ್ಲಿ ಸಿದ್ದೀಕ್ ತನ್ನ ಮೇಲೆ ಅತ್ಯಾಚಾರವೆಸಗಿದ್ದರು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಆಗಸ್ಟ್ ನಲ್ಲಿ ತಿರುವನಂತಪುರದ ಮ್ಯೂಝಿಯಂ ಪೋಲಿಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಕ್ರಿಮಿನಲ್ ಬೆದರಿಕೆ ಆರೋಪಗಳಲ್ಲಿ ಸಿದ್ದೀಕ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಮಹಿಳೆಯನ್ನು ಅಕ್ರಮ ದಿಗ್ಬಂಧನದಲ್ಲಿರಿಸಿದ್ದ ಆರೋಪವನ್ನೂ ಅವರು ಎದುರಿಸುತ್ತಿದ್ದಾರೆ.
ಲಭ್ಯ ಸಾಕ್ಷ್ಯಾಧಾರಗಳು ಸಿದ್ದೀಕ್ ಪ್ರಕರಣದಲ್ಲಿ ಭಾಗಿಯಾಗಿದ್ದನ್ನು ತೋರಿಸುತ್ತಿವೆ ಎಂದು ಬೆಟ್ಟು ಮಾಡಿದ್ದ ಕೇರಳ ಉಚ್ಛ ನ್ಯಾಯಾಲಯವು ಅವರ ಅರ್ಜಿಯನ್ನು ವಜಾಗೊಳಿಸಿತ್ತು.
ಜಾಮೀನು ಕೋರಿ ಸಿದ್ದೀಕ್ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಶೇಷ ರಜೆ ಅರ್ಜಿಯನ್ನು ಸಲ್ಲಿಸಿದ್ದಾರೆ.
ಕಳೆದ ಆಗಸ್ಟ್ ನಲ್ಲಿ ನ್ಯಾ.ಹೇಮಾ ಸಮಿತಿ ವರದಿ ಬಿಡುಗಡೆಯ ಬಳಿಕ ತಮ್ಮ ಪುರುಷ ಸಹೋದ್ಯೋಗಿಗಳಿಂದ ಲೈಂಗಿಕ ದುರ್ವರ್ತನೆಯ ಆರೋಪಗಳನ್ನು ಮಾಡಿರುವ ಮಲಯಾಳಂ ಚಿತ್ರರಂಗದ ಹಲವಾರು ಮಹಿಳೆಯರಲ್ಲಿ ಈ ಪ್ರಕರಣದ ದೂರುದಾರ ಮಹಿಳೆ ಸೇರಿದ್ದಾರೆ.
ಹೇಮಾ ಸಮಿತಿ ವರದಿ ಬಿಡುಗಡೆಯ ಬಳಿಕ ಮಲಯಾಳಂ ಚಿತ್ರ ಕಲಾವಿದರ ಸಂಘದ ಪದಾಧಿಕಾರಿಗಳೊಂದಿಗೆ ತಾನು ಸುದ್ದಿಗೋಷ್ಠಿಯನ್ನು ನಡೆಸಿದ್ದಕ್ಕೆ ಪ್ರತೀಕಾರವಾಗಿ ತನ್ನ ವಿರುದ್ಧ ಆರೋಪಗಳನ್ನು ಮಾಡಲಾಗಿದೆ ಎಂದು ಸಿದ್ದೀಕ್ ಉಚ್ಛ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ವಾದಿಸಿದ್ದರು.
ದೂರುದಾರ ಮಹಿಳೆ 2019ರಲ್ಲಿ ತನ್ನ ವಿರುದ್ಧ ಮೊದಲು ಆರೋಪಗಳನ್ನು ಮಾಡಿದ್ದರು. ತನ್ನ ವಿರುದ್ಧ ಜಾಮೀನುರಹಿತ ಅಪರಾಧ ಪ್ರಕರಣ ದಾಖಲಾಗುವಂತಾಗಲು ಆಕೆ ತನ್ನ ಹೇಳಿಕೆಯಲ್ಲಿನ ಮಹತ್ವದ ವಿವರಗಳನ್ನು ಬದಲಿಸಿದ್ದಾರೆ ಎಂದೂ ಸಿದ್ದೀಕ್ ಪ್ರತಿಪಾದಿಸಿದ್ದರು.
ದೂರುದಾರರು ನೀಡಿರುವ ಹೇಳಿಕೆಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿದ್ದರೂ 2019ರಿಂದ ಸಿದ್ದೀಕ್ ಹಲವಾರು ಸಲ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆಕೆ ಸಾರ್ವಜನಿಕವಾಗಿ ಆರೋಪಿಸಿದ್ದಾರೆ ಎಂದು ರಾಜ್ಯ ಸರಕಾರವು ನ್ಯಾಯಾಲಯಕ್ಕೆ ತಿಳಿಸಿತ್ತು.