ಮೊರೆ ಕೇಳಿಸದ ಅಸಂಖ್ಯಾತ ವಲಸಿಗರ ಭರವಸೆಯ ಸಂಕೇತ ; 42 ವರ್ಷಗಳ ನಂತರ ತವರಿಗೆ ಮರಳಿದ ಬಹ್ರೇನ್ ನಲ್ಲಿ ಸಿಲುಕಿಕೊಂಡಿದ್ದ ಕೇರಳಿಗ!

Update: 2025-04-24 22:29 IST
ಮೊರೆ ಕೇಳಿಸದ ಅಸಂಖ್ಯಾತ ವಲಸಿಗರ ಭರವಸೆಯ ಸಂಕೇತ ; 42 ವರ್ಷಗಳ ನಂತರ ತವರಿಗೆ ಮರಳಿದ ಬಹ್ರೇನ್ ನಲ್ಲಿ ಸಿಲುಕಿಕೊಂಡಿದ್ದ ಕೇರಳಿಗ!

Credit: Facebook/Pravasi Legal Cell

  • whatsapp icon

ತಿರುವನಂತಪುರಂ: ಸುಮಾರು 40 ವರ್ಷಗಳಿಂದ ಮಧ್ಯಪ್ರಾಚ್ಯದಲ್ಲಿ ಸಿಲುಕಿಕೊಂಡಿದ್ದ ಭಾರತೀಯರೊಬ್ಬರು ಕೊನೆಗೂ ಕೇರಳದಲ್ಲಿನ ತಮ್ಮ ಕುಟುಂಬದೊಂದಿಗೆ ಒಂದುಗೂಡಲಿದ್ದಾರೆ.

ತಿರುವನಂತಪುರಂನ ಪೌಡಿಕೋಣಂ ಬಳಿಯ ಸಣ್ಣ ಗ್ರಾಮವೊಂದರ ನಿವಾಸಿಯಾದ 74 ವರ್ಷದ ಗೋಪಾಲನ್ ಚಂದ್ರನ್ ಎಂಬುವವರು ಉತ್ತಮ ಗಳಿಕೆಯ ಉದ್ಯೋಗ ಪಡೆಯಲು ಹಾಗೂ ತಮ್ಮ ಕುಟುಂಬಕ್ಕೆ ನೆರವಾಗಲು 42 ವರ್ಷಗಳ ಹಿಂದೆ 1983ರಲ್ಲಿ ಬಹ್ರೇನ್ ಗೆ ತೆರಳಿದ್ದರು.

ಆದರೆ, ಅವರ ಮಾಲಕರು ಮೃತಪಟ್ಟ ನಂತರ, ಅವರ ಪಾಸ್ ಪೋರ್ಟ್ ಕಳೆದು ಹೋಗಿದ್ದರಿಂದ, 42 ವರ್ಷಗಳಿಂದ ಅವರು ಅಲ್ಲಿಯೇ ಸಿಲುಕಿಕೊಂಡಿದ್ದರು. ಇದರಿಂದಾಗಿ, ದಾಖಲೆರಹಿತ ವಲಸಿಗರೆನಿಸಿಕೊಂಡ ಗೋಪಾಲನ್ ಚಂದ್ರನ್, ಅಕ್ರಮ ವಲಸೆಯ ಆರೋಪಕ್ಕೆ ತುತ್ತಾದರು. ಇದರಿಂದಾಗಿ, ಅವರು ಬಹ್ರೇನ್ ತೊರೆಯುವುದೇ ಅಸಾಧ್ಯವಾಗಿ ಪರಿಣಮಿಸಿತು.

ಆದರೆ, ಹಲವಾರು ವರ್ಷಗಳ ನಂತರ, ಭಾರತ ಹಾಗೂ ವಿದೇಶಗಳಲ್ಲಿ ಅನ್ಯಾಯಕ್ಕೆ ತುತ್ತಾಗಿರುವ ಭಾರತೀಯರ ಪರವಾಗಿ ಹೋರಾಡುತ್ತಿರುವ ನಿವೃತ್ತ ನ್ಯಾಯಾಧೀಶರು, ವಕೀಲರು ಹಾಗೂ ಪತ್ರಕರ್ತರನ್ನು ಒಳಗೊಂಡ ಸರಕಾರೇತರ ಸಂಸ್ಥೆಯಾದ ಪ್ರವಾಸಿ ಲೀಗಲ್ ಸೆಲ್, ಗೋಪಾಲನ್ ಚಂದ್ರನ್ ತಮ್ಮ ತವರಿಗೆ ಮರಳುವುದನ್ನು ಸಾಧ್ಯೆವಾಗಿಸಿದೆ.

ಎಪ್ರಿಲ್ 22ರಂದು ಈ ಕತೆಯನ್ನು ತನ್ನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರವಾಸಿ ಲೀಗಲ್ ಸೆಲ್ ಸರಕಾರೇತರ ಸಂಸ್ಥೆಯು, “ನೀವು ಈ ಕತೆಯನ್ನು ಓದಿದ ನಂತರ, ದೀರ್ಘಕಾಲ ಅದರಲ್ಲೇ ಕಳೆದು ಹೋಗುವಂಥ ಕತೆಯೊಂದನ್ನು ನಾವಿಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಈ ಕತೆಯು ನಷ್ಟ, ಪರಿಶ್ರುಮ ಹಾಗೂ ಮನುಷ್ಯನ ಅಸಾಧಾರಣ ಕಾರುಣ್ಯಕ್ಕೆ ಸಂಬಂಧಿಸಿದ್ದಾಗಿದೆ” ಎಂದು ಹೇಳಿದೆ.

“1983ರಲ್ಲಿ ಗೋಪಾಲನ್ ಚಂದ್ರನ್ ಎಂಬ ಯುವಕರೊಬ್ಬರು ಕೇರಳದ ಪೌಡಿಕೋಣಂ ಬಳಿಯ ಸಣ್ಣ ಗ್ರಾಮವನ್ನು ತೊರೆದು, ತನ್ನ ಕುಟುಂಬಕ್ಕಾಗಿ ಸಂಪೂರ್ಣ ಭರವಸೆ ಹಾಗೂ ಕನಸುಗಳೊಂದಿಗೆ ಬಹ್ರೇನ್ ಗೆ ತೆರಳಿದ್ದರು. ಆದರೆ, ಜೀವನವು ತನ್ನದೇ ಆದ ವಿಭಿನ್ನ ಯೋಜನೆ ಹೊಂದಿತ್ತು. ಅವರ ಮಾಲಕ ಮೃತಪಟ್ಟ ನಂತರ ಹಾಗೂ ಅವರ ಪಾಸ್ ಪೋರ್ಟ್ ಕಳೆದು ಹೋಗಿದ್ದರಿಂದ, ಗೋಪಾಲನ್ ಚಂದ್ರನ್ ದಾಖಲೆರಹಿತ ವಲಸಿಗ ಎಂಬ ಆರೋಪಕ್ಕೆ ಗುರಿಯಾಗಬೇಕಾಯಿತು ಹಾಗೂ ವಿದೇಶಿ ನೆಲದಲ್ಲಿ 42 ವರ್ಷಗಳ ಸುದೀರ್ಘ ಕಾಲ ಸಿಲುಕಿಕೊಳ್ಳಬೇಕಾಯಿತು” ಎಂದೂ ಆ ಪೋಸ್ಟ್ ನಲ್ಲಿ ಹೇಳಲಾಗಿದೆ.

ಸುಧೀರ್ ತಿರುನಿಲತ್ ನೇತೃತ್ವದ ಪ್ರವಾಸಿ ಲೀಗಲ್ ಸೆಲ್ ತಂಡವು ಈ ವಿಷಯದ ಕುರಿತು ಬಹ್ರೇನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಬಹ್ರೇನ್ ನ ವಲಸೆ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, ಗೋಪಾಲನ್ ಚಂದ್ರನ್ ಅವರು ತಮ್ಮ ತವರಿಗೆ ಮರಳುವುದನ್ನು ಸಾಧ್ಯವಾಗಿಸಿದೆ.

“ಕಾನೂನು ಅಡೆತಡೆಗಳನ್ನು ದಾಟಿ, ಅವರಿಗೆ ಆಶ್ರಯ ಒದಗಿಸಿ, ದೀರ್ಘಕಾಲದಿಂದ ಕಳೆದು ಹೋಗಿದ್ದ ಅವರ ಕುಟುಂಬವನ್ನು ಪತ್ತೆ ಹಚ್ಚಿ ಹಾಗೂ ಪ್ರಾಧಿಕಾರಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ, ಗೋಪಾಲನ್ ಚಂದ್ರನ್ ಅವರ ಕತೆ ಬೆಳಕಿಗೆ ಬರುವಂತೆ ಅವರು ದಣಿವರಿಯದ ಕೆಲಸ ಮಾಡಿದ್ದಾರೆ” ಎಂದೂ ಪ್ರವಾಸಿ ಲೀಗಲ್ ಸೆಲ್ ಸರಕಾರೇತರ ಸಂಸ್ಥೆ ಶ್ಲಾಘಿಸಿದೆ.

“ತಮ್ಮ ಪುತ್ರನಿಗಾಗಿ ಕಾಯುವುದನ್ನು ಎಂದಿಗೂ ನಿಲ್ಲಿಸದ ತಮ್ಮ 95 ವರ್ಷದ ತಾಯಿಯನ್ನು ನೋಡಲು ಗೋಪಾಲನ್ ಚಂದ್ರನ್ ಕೊನೆಗೂ ತಮ್ಮ ಮನೆಗೆ ಮರಳುತ್ತಿದ್ದಾರೆ. ಅವರು ತಮಗೆ ಸೇರಿದ ಯಾವುದೇ ವಸ್ತುಗಳಿಲ್ಲದೆ, ಕೇವಲ ನೆನಪುಗಳು, ಕಣ್ಣೀರು ಹಾಗೂ ಕುಟುಂಬದೊಂದಿಗೆ ಮತ್ತೆ ಒಂದುಗೂಡುವ ಕನಸಿನೊಂದಿಗೆ ಇಂದು ಬೆಳಗ್ಗೆ ವಿಮಾನದಲ್ಲಿ ತವರಿಗೆ ಮರಳುತ್ತಿದ್ದಾರೆ. ಇದು ಮಾನವೀಯತೆ, ನ್ಯಾಯ ಹಾಗೂ ಪಟ್ಟುಬಿಡದ ಕಾರುಣ್ಯ ಒಗ್ಗೂಡಿದಾಗ ಏನಾಗುತ್ತದೆ ಎಂಬುದರ ಕತೆಯಾಗಿದೆ. ಇದು ಮೊರೆ ಕೇಳಿಸದ ಅಸಂಖ್ಯಾತ ವಲಸಿಗರ ಭರವಸೆಯ ಸಂಕೇತವಾಗಿದೆ. ತವರಿಗೆ ಸುಸ್ವಾಗತ ಗೋಪಾಲನ್. ನಿಮ್ಮನ್ನು ಎಂದಿಗೂ ಮರೆಯಲಾಗುವುದಿಲ್ಲ” ಎಂದೂ ಆ ಪೋಸ್ಟ್ ನಲ್ಲಿ ಹೇಳಲಾಗಿದೆ.

ಈ ವಿಷಯದಲ್ಲಿ ನೆರವು ಮತ್ತು ಸಹಕಾರ ನೀಡಿದ ಭಾರತೀಯ ರಾಜತಾಂತ್ರಿಕ ಕಚೇರಿ ಹಾಗೂ ಬಹ್ರೇನ್ ರಾಜತಾಂತ್ರಿಕ ಕಚೇರಿಗಳೆರಡಕ್ಕೂ ಪ್ರವಾಸಿ ಲೀಗಲ್ ಸೆಲ್ ಸರಕಾರೇತರ ಸಂಸ್ಥೆಯು ಹೃತ್ಪೂರ್ವಕ ಕೃತಜ್ಞತೆಯನ್ನೂ ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News