ಕೇರಳ: 5 ವರ್ಷದ ಬಾಲಕಿಯ ಅತ್ಯಾಚಾರ, ಹತ್ಯೆ ಪ್ರಕರಣ; ಆರೋಪಿ ದೋಷಿ ಎಂದ ನ್ಯಾಯಾಲಯ

Update: 2023-11-04 16:38 GMT

Photo: India Today

ಎರ್ನಾಕುಳಂ: ಅಲುವಾದಲ್ಲಿ ಐದು ವರ್ಷದ ಬಾಲಕಿಯ ಅಪಹರಿಸಿ, ಅತ್ಯಾಚಾರ ಎಸಗಿ, ಹತ್ಯೆಗೈದ ಅಶ್ಪಕ್ ಆಲಂನನ್ನು ಎರ್ನಾಕುಳಂನ ಪೋಕ್ಸೊ ನ್ಯಾಯಾಲಯ ಶನಿವಾರ ದೋಷಿ ಎಂದು ಘೋಷಿಸಿದೆ.

ಈ ಕುರಿತು ವಿಚಾರಣೆ ನಡೆಸಿದ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ಕೆ. ಸೋಮನ್ ಅವರು ಬಿಹಾರ ಮೂಲದ ಐದು ವರ್ಷದ ಬಾಲಕಿಯನ್ನು ಅತ್ಯಾಚಾರ ಎಸಗಿ, ಕೊಲೆ ಮಾಡಿದ ಬಿಹಾರದ ವಲಸೆ ಕಾರ್ಮಿಕ ಅಶ್ಪಕ್ ಆಲಂನನ್ನು ದೋಷಿ ಎಂದು ಘೋಷಿಸಿದರು.

2023 ಜುಲೈ 28ರಂದು ಸಂಭವಿಸಿದ್ದ ಈ ಘಟನೆ ರಾಜ್ಯದ ಆತ್ಮಸಾಕ್ಷಿಯನ್ನೇ ಕಲಕಿತ್ತು. ಬಿಹಾರದ ಕಾರ್ಮಿಕ ದಂಪತಿಯ ಐದು ವರ್ಷದ ಪುತ್ರಿ ಅಲುವಾದ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು.

ಸಿಸಿಟಿವಿ ದೃಶ್ಯಾವಳಿಯಲ್ಲಿ ಆರೋಪಿ ಅಶ್ಪಕ್ ಅಲಂ ಬಾಲಕಿಯೊಂದಿಗೆ ಹೊಲಕ್ಕೆ ಹೋಗುತ್ತಿರುವುದನ್ನು ಪೊಲೀಸರು ಗುರುತಿಸಿದ್ದರು. ಮರು ದಿನ ಬಾಲಕಿಯ ಮೃತದೇಹ ಮಾರುಕಟ್ಟೆಯಲ್ಲಿ ಗೋಣಿಚೀಲವೊಂದರಲ್ಲಿ ಪತ್ತೆಯಾಗಿತ್ತು. ಪ್ರಾಸಿಕ್ಯೂಷನ್ ಪ್ರಕಾರ ಬಾಲಕಿ ವಾಸಿಸುತ್ತಿರುವ ಕಟ್ಟಡದಲ್ಲಿಯೇ ವಾಸಿಸುತ್ತಿದ್ದ ಅಶ್ಪಕ್ ಆಲಂ ಆಕೆಯನ್ನು ಅಪಹರಿಸಿ, ಬರ್ಬರವಾಗಿ ಅತ್ಯಾಚಾರ ಎಸಗಿದ್ದಾನೆ. ಅನಂತರ ಹತ್ಯೆಗೈದಿದ್ದಾನೆ.

ಪೋಕ್ಸೊ ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿ ದೋಷಿ ಎಂದು ದೃಢಪಟ್ಟಿದೆ ಎಂದು ನ್ಯಾಯಾಧೀಶರು ಹೇಳಿದರು. ಅಲ್ಲದೆ, ಶಿಕ್ಷೆಯ ಪ್ರಮಾಣವನ್ನು ನವೆಂಬರ್ 9ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದರು.

ದೇಶದಲ್ಲಿ ಅತಿ ತ್ವರಿತವಾಗಿ ವಿಚಾರಣೆ ನಡೆದ ಪ್ರಕರಣಗಳಲ್ಲಿ ಇದು ಕೂಡ ಒಂದಾಗಿದ್ದು, ಅಪರಾಧ ನಡೆದ ಕೇವಲ 99 ದಿನಗಳಲ್ಲಿ ಅಶ್ಪಕ್ ಆಲಂನನ್ನು ದೋಷಿ ಎಂದು ಘೋಷಿಸಲಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News