ಮಣಿಪುರ ಕ್ರಿಶ್ಚಿಯನ್ನರನ್ನು ಪ್ರತ್ಯೇಕಿಸಲು ಖಾಲಿಸ್ತಾನಿ ಉಗ್ರರು ಪ್ರಚೋದಿಸಿದರು: ಕೇಂದ್ರ ಸರಕಾರ

PC : NDTV
ಹೊಸದಿಲ್ಲಿ: ಜುಲೈ 202ರಲ್ಲಿ ಭಯೋತ್ಪಾದಕ ಎಂದು ಭಾರತದಿಂದ ಘೋಷಿತಗೊಂಡಿರುವ ಗುರುಪತ್ವಂತ್ ಸಿಂಗ್ ಪನ್ನೂನ್ ನೇತೃತ್ವದ ನಿಷೇಧಿತ ಖಾಲಿಸ್ತಾನಿ ಸಂಘಟನೆಯು ಭಾರತದಿಂದ ಪ್ರತ್ಯೇಕಗೊಳ್ಳುವಂತೆ ಮಣಿಪುರದ ತಮಿಳರು, ಮುಸ್ಲಿಮರು ಹಾಗೂ ಕ್ರಿಶ್ಚಿ ಯನ್ನರನ್ನು ಪ್ರಚೋದಿಸಿತ್ತು ಎಂದು ಗೃಹ ಸಚಿವಾಲಯ ನ್ಯಾ ಯಮಂಡಳಿಯ ಆದೇಶದ ಭಾಗವಾಗಿ ರಚನೆಗೊಂಡಿದ್ದ ಗುಪ್ತಚರ ಸಂಸ್ಥೆಗಳು ಹೇಳಿವೆ.
ಇದಲ್ಲದೆ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮೇಲೆ ಭಯೋತ್ಪಾದಕ ದಾಳಿ ನಡೆಸಲೂ ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ ಯೋಜಿಸಿತ್ತು ಎನ್ನಲಾಗಿದೆ.
ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯ ಮೇಲಿನ ನಿಷೇಧವನ್ನು ಇನ್ನೂ ಐದು ವರ್ಷಗಳ ಕಾಲ ವಿಸ್ತರಿಸುವ ಗೆಜೆಟ್ ಅಧಿಸೂಚನೆಯಲ್ಲಿ ಸರಕಾರ ಈ ವಿಷಯವನ್ನು ಪ್ರಕಟಿಸಿದೆ.
ಅಲ್ಪಸಂಖ್ಯಾತ ಸಮುದಾಯಗಳನ್ನು ಇನ್ನಿತರ ಸಮುದಾಯಗಳ ವಿರುದ್ಧ ಪ್ರಚೋದಿಸುವ ಮೂಲಕ ಭಾರತ ವಿರೋಧಿ ಕಾರ್ಯಸೂಚಿಯನ್ನು ತೀವ್ರಗೊಳಿಸಲು ಜನರನ್ನು ಕೋಮು ನೆಲೆಯಲ್ಲಿ ವಿಭಜಿಸುವುದು ಸಿಖ್ಸ್ ಫಾರ್ ಜಸ್ಟೀಸ್ ನ ಪ್ರಮುಖ ಸಾಧನವಾಗಿದೆ.
“ಮಣಿಪುರದಲ್ಲಿನ ಕ್ರಿಶ್ಚಿಯನ್ನರಿಗೆ ಪ್ರತ್ಯೇಕ ರಾಷ್ಟ್ರಕ್ಕಾಗಿ ಧ್ವನಿ ಎತ್ತುವಂತೆ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆ ಪ್ರಚೋದನೆ ನೀಡುತ್ತಿದೆ. ತಮಿಳುನಾಡು ಜನರಿಗೆ ದ್ರಾವಿಡಸ್ಥಾನ ಹಾಗೂ ಮುಸ್ಲಿಮರ ಭಾವನಾತ್ಮಕತೆಯನ್ನು ಪ್ರಚೋದಿಸಿ, ಭಾರತದಲ್ಲಿನ ಮುಸ್ಲಿಮರು ಪ್ರತ್ಯೇಕ ಉರ್ದುಯಿಸ್ಥಾನಕ್ಕೆ ಬೇಡಿಕೆ ಇಡುವಂತೆ ಮಾಡಲೂ ಸಿಖ್ಸ್ ಫಾರ್ ಜಸ್ಟೀಸ್ ಪ್ರಚೋದಿಸಿದೆ ಎಂದು ಗುಪ್ತಚರ ಸಂಸ್ಥೆಗಳು ಸಿದ್ಧಪಡಿಸಿರುವ ಟಿಪ್ಪಣಿಯಲ್ಲಿ ಹೇಳಲಾಗಿದೆ.
“ಇದಲ್ಲದೆ, ಭಾರತ ಸರಕಾರದ ಕಿರುಕುಳದತ್ತ ಬೊಟ್ಟು ಮಾಡಿ, ನಮ್ಮ ವಿಭಜನೆಯ ಪ್ರಯತ್ನಕ್ಕೆ ಕೈಜೋಡಿಸುವಂತೆ ಭಾರತದ ದಲಿತರಿಗೆ ಸಿಖ್ಸ್ ಫಾರ್ ಜಸ್ಟೀಸ್ ಮನವಿಯನ್ನೂ ಮಾಡಿದೆ. ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ಪಂಜಾಬ್ ಹಾಗೂ ಹರ್ಯಾಣ ರೈತರನ್ನು ಪ್ರಚೋದಿಸುವ ಕೆಲಸದಲ್ಲೂ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆ ಭಾಗಿಯಾಗಿದೆ” ಎಂದು ಗುಪ್ತಚರ ಸಂಸ್ಥೆಗಳ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ.