ಕೋಲ್ಕತಾ: ದುಷ್ಕರ್ಮಿಗಳಿಂದ ಗೆಳತಿಯನ್ನು ರಕ್ಷಿಸಲು ಯತ್ನಿಸಿದ್ದ ಯುವಕನ ಹತ್ಯೆ

ಸಾಂದರ್ಭಿಕ ಚಿತ್ರ
ಕೋಲ್ಕತಾ: ತನ್ನ ಲಿವ್-ಇನ್ ಸಂಗಾತಿಯನ್ನು ಲೈಂಗಿಕ ಕಿರುಕುಳದಿಂದ ರಕ್ಷಿಸುವ ಪ್ರಯತ್ನಿಸಿದ್ದ ಯುವಕನನ್ನು ದುಷ್ಕರ್ಮಿಗಳು ಥಳಿಸಿ ಹತ್ಯೆಗೈದಿರುವ ಘಟನೆ ಕೋಲ್ಕತಾದ ಗೌರಾಂಗ ನಗರದಲ್ಲಿ ನಡೆದಿದೆ. ಯುವಕ ಮತ್ತು ಯುವತಿ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಲಿವ್-ಇನ್ ಸಂಬಂಧದಲ್ಲಿದ್ದು, ಶೀಘ್ರವೇ ಮದುವೆಯಾಗಲಿದ್ದರು.
ಜೋಡಿಯ ನಡುವೆ ಬಿರುಸಿನ ವಾಗ್ವಾದದ ಬಳಿಕ ಯುವತಿ ನಸುಕಿನ 2:30ರ ಸುಮಾರಿಗೆ ತಮ್ಮ ಫ್ಲ್ಯಾಟ್ ನಿಂದ ತೆರಳಿದ್ದಳು. ಕಳವಳಗೊಂಡಿದ್ದ ಪ್ರಿಯಕರ ಸಂಕೇತ ಚಟರ್ಜಿ (29) ಆಕೆಯನ್ನು ಹುಡುಕಿಕೊಂಡು ಹೊರಟಿದ್ದ. ಆ ವೇಳೆಗೆ ಪಾನಮತ್ತರಾಗಿ ಅವರ ನಿವಾಸದ ಬಳಿ ಠಳಾಯಿಸುತ್ತಿದ್ದ ಮೂವರು ಯುವತಿಯನ್ನು ಅಡ್ಡಗಟ್ಟಿದ್ದು, ಓರ್ವ ಆಕೆಯ ತೋಳು ಹಿಡಿದು ತನ್ನ ಬಳಿಗೆ ಎಳೆದುಕೊಂಡಿದ್ದ. ಯುವತಿಯು ಕೂಗಿಕೊಂಡಾಗ ಸಂಕೇತ್ ಆಕೆಯ ರಕ್ಷಣೆಗೆ ಧಾವಿಸಿದ್ದ. ಯುವತಿಯನ್ನು ದುಷ್ಕರ್ಮಿಗಳಿಂದ ಮುಕ್ತಗೊಳಿಸಲು ಯಶಸ್ವಿಯಾಗಿದ್ದರೂ ಅವರಲ್ಲೋರ್ವ ಇಟ್ಟಿಗೆಯಿಂದ ಆತನ ತಲೆಗೆ ಹೊಡೆದಿದ್ದ. ಇತರ ಇಬ್ಬರು ದೊಣ್ಣೆಗಳಿಂದ ಥಳಿಸಿದ್ದರು.
ಸಂಕೇತನನ್ನು ಬಿಡುವಂತೆ ಯುವತಿ ದುಷ್ಕರ್ಮಿಗಳನ್ನು ಬೇಡಿಕೊಂಡಿದ್ದಳು, ಬಳಿಕ ನೆರವು ಕೋರಿ ಸಮೀಪದ ಮನೆಗಳಿಗೆ ಧಾವಿಸಿದ್ದಳು, ಆದರೆ ಅದೆಲ್ಲವೂ ನಿಷ್ಫಲವಾಗಿತ್ತು.
ನಂತರ ಯುವತಿ ತನ್ನ ಸ್ನೇಹಿತರಿಗೆ ಕರೆ ಮಾಡಿದ್ದು, ಅವರು ಪೋಲಿಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಆಗಮಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಸಂಕೇತ ಆಸ್ಪತ್ರೆ ದಾರಿಯಲ್ಲಿ ಮೃತಪಟ್ಟಿದ್ದಾನೆ. ಕೊಲೆ ಆರೋಪದಲ್ಲಿ ಶಂಭು ಮಂಡಲ್, ಸಾಗರ ದಾಸ್ ಮತ್ತು ರಾಜು ಘೋಷ್ ಎನ್ನುವವರನ್ನು ಪೋಲಿಸರು ಬಂಧಿಸಿದ್ದಾರೆ.