ಕೋಟಾ: ನೀಟ್ ಆಕಾಂಕ್ಷಿ ಆತ್ಮಹತ್ಯೆ

ಕೋಟಾ: ಇಪ್ಪತ್ಮೂರು ವರ್ಷಗಳ ಇನ್ನೋರ್ವ ನೀಟ್ ಆಕಾಂಕ್ಷಿಯ ಮೃತದೇಹ ಇಲ್ಲಿನ ರೈಲ್ವೆ ಹಳಿಯ ಸಮೀಪ ಗುರುವಾರ ಬೆಳಗ್ಗೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದರೊಂದಿಗೆ ಕೋಟಾದಲ್ಲಿ ಕಳೆದ 48 ಗಂಟೆಗಳಲ್ಲಿ ನೀಟ್ ಆಕಾಂಕ್ಷಿ ಆತ್ಮಹತ್ಯೆ ಮಾಡಿಕೊಂಡ ಎರಡನೇ ಪ್ರಕರಣ ಇದಾಗಿದೆ. ಕಳೆದ ಜನವರಿಯಿಂದ ಇದುವರೆಗೆ 12 ಮಂದಿ ನೀಟ್ ಆಕಾಂಕ್ಷಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯನ್ನು ಉಲ್ಲೇಖಿಸಿರುವ ಅವರು, ವಿದ್ಯಾರ್ಥಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತದೇಹದ ಪತ್ತೆಯಾದ ಲ್ಯಾಂಡ್ ಮಾರ್ಕ್ ಸಿಟಿ ಪ್ರದೇಶದಲ್ಲಿ ಸುಸೈಡ್ ನೋಟ್ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ನೀಟ್ ಆಕಾಂಕ್ಷಿಯನ್ನು ದಿಲ್ಲಿಯ ತುಗ್ಲಕಾಬಾದ್ ನ ನಿವಾಸಿ ರೋಶನ್ ಶರ್ಮಾ ಎಂದು ಗುರುತಿಸಲಾಗಿದೆ. ಆತನ ಮೃತದೇಹ ಪೊದೆಗಳ ನಡುವಿನಲ್ಲಿ ಪತ್ತೆಯಾಯಿತು. ಮೃತದೇಹವನ್ನು ಗುರುತಿಸಿದ ಕೆಲವು ಪಾದಚಾರಿಗಳು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಇನ್ಸ್‌ಪೆಕ್ಟರ್ ಅರವಿಂದ್ ಭಾರದ್ವಾಜ್ ತಿಳಿಸಿದ್ದಾರೆ.
ಪೊಲೀಸರು ರೋಶನ್ ಶರ್ಮಾ ಅವರ ಹೆತ್ತವರೊಂದಿಗೆ ಮಾತುಕತೆ ನಡೆಸಿದ್ದಾರೆ. ರೋಶನ್ ಶರ್ಮಾನೊಂದಿಗೆ ಬುಧವಾರ ರಾತ್ರಿ ಕೊನೆಯದಾಗಿ ಮಾತನಾಡಿರುವುದಾಗಿ ಅವರು ತಿಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನ್ನಿಂದ ನೀಟ್ ಪರೀಕ್ಷೆ ಬರೆಯುವುದಾಗಲಿ, ದಿಲ್ಲಿಗೆ ಹಿಂದಿರುಗುವುದಾಗಲಿ ಸಾಧ್ಯವಿಲ್ಲ ಎಂದು ರೋಶನ್ ಶರ್ಮಾ ಹೇಳಿದ್ದ ಎಂದು ಆತನ ಕುಟುಂಬದ ಸದಸ್ಯರು ತಿಳಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.