ಸಂಸತ್ತಿನಲ್ಲಿ ತಮಿಳು ಭಾಷೆಗಾಗಿ ಹೋರಾಡಿದ್ದ ಹಿರಿಯ ಕಾಂಗ್ರೆಸ್ ನಾಯಕ ಕುಮಾರಿ ಅನಂತನ್ ನಿಧನ

ಕುಮಾರಿ ಅನಂತನ್ | Credit: X/@TelanganaCMO
ಚೆನ್ನೈ: ಸಂಸತ್ತಿನಲ್ಲಿ ತಮಿಳು ಭಾಷೆಯ ಬಳಕೆಗಾಗಿ ಹೋರಾಡಿದ್ದ ಮತ್ತು ತಮಿಳಿನಲ್ಲಿ ಮಾತನಾಡುವಲ್ಲಿ ಯಶಸ್ವಿಯಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ತಮಿಳಿನ ಖ್ಯಾತ ವಾಗ್ಮಿ ಕುಮಾರಿ ಅನಂತನ್(92) ಅವರು ಬುಧವಾರ ನಸುಕಿನಲ್ಲಿ ವಿಧಿವಶರಾಗಿದ್ದಾರೆ ಎಂದು ಅವರ ಕುಟುಂಬವು ತಿಳಿಸಿದೆ.
ತಮಿಳುನಾಡು ಕಾಂಗ್ರೆಸ್ ಸಮಿತಿ(ಟಿಎನ್‌ಸಿಸಿ)ಯ ಮಾಜಿ ಅಧ್ಯಕ್ಷ ಅನಂತನ್ ಅವರು ಹಿರಿಯ ಬಿಜೆಪಿ ನಾಯಕಿ ಹಾಗೂ ತೆಲಂಗಾಣದ ಮಾಜಿ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಸೇರಿದಂತೆ ನಾಲ್ವರು ಪುತ್ರಿಯರು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.
ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಪ್ರತಿಪಕ್ಷ ನಾಯಕ ಎಡಪ್ಪಾಡಿ ಕೆ.ಪಳನಿಸ್ವಾಮಿ, ವಿಕೆಸಿ ಮುಖ್ಯಸ್ಥ ಥೋಲ್ ತಿರುಮಾವಲನ್ ಮತ್ತು ಇತರ ನಾಯಕರು ಸೌಂದರರಾಜನ್ ನಿವಾಸಕ್ಕೆ ಭೇಟಿ ನೀಡಿ ದಿವಂಗತ ನಾಯಕನಿಗೆ ಶ್ರದ್ಧಾಂಜಲಿಗಳನ್ನು ಸಲ್ಲಿಸಿ, ಶೋಕತಪ್ತ ಕುಟುಂಬ ಸದಸ್ಯರಿಗೆ ಸಂತಾಪಗಳನ್ನು ಸೂಚಿಸಿದರು.
ಅನಂತನ್ ನಿಧನವು ತಮಿಳು ಸಮಾಜಕ್ಕೆ ದೊಡ್ಡ ನಷ್ಟ ಎಂದು ಸ್ಟಾಲಿನ್ ತನ್ನ ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ.
ಅನಂತನ್ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲು 17 ಪಾದಯಾತ್ರೆಗಳನ್ನು ಮಾಡಿ 5,548 ಕಿ.ಮೀ.ದೂರವನ್ನು ಕ್ರಮಿಸಿದ್ದರು ಎಂದು ನೆನಪಿಸಿಕೊಂಡ ಟಿಎನ್‌ಸಿಸಿ ಅಧ್ಯಕ್ಷ ಕೆ.ಸೆಲ್ವಪೆರುಂಥಗೈ, ಅವರು ಮಹಾನ್ ಗಾಂಧಿವಾದಿಯಾಗಿದ್ದರು ಎಂದು ಬಣ್ಣಿಸಿದರು.