ಭೂ ವ್ಯವಹಾರ ಹಗರಣ | 2ನೇ ದಿನವೂ ಈಡಿ ಮುಂದೆ ಹಾಜರಾದ ವಾದ್ರಾ

ರೋಬರ್ಟ್ ವಾದ್ರಾ | PC : PTI
ಹೊಸದಿಲ್ಲಿ: ಹರ್ಯಾಣ ಭೂ ವ್ಯವಹಾರಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಭಾವ ಹಾಗೂ ಉದ್ಯಮಿ ರೋಬರ್ಟ್ ವಾದ್ರಾ ಜಾರಿ ನಿರ್ದೇಶನಾಲಯದ ಮುಂದೆ ಸತತ ಎರಡನೇ ದಿನವಾದ ಬುಧವಾರ ಕೂಡ ವಿಚಾರಣೆಗೆ ಹಾಜರಾಗಿದ್ದಾರೆ.
ಅವರು ಪತ್ನಿ ಹಾಗೂ ಕೇರಳದ ವಯನಾಡ್‌ನ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂದಿ ವಾದ್ರಾ ಅವರೊಂದಿಗೆ ಆಗಮಿಸಿದರು. ಜಾರಿ ನಿರ್ದೇಶನಾಲಯದ ಒಳಗೆ ಹೋಗುವ ಮುನ್ನ ಅವರಿಬ್ಬರು ಆತ್ಮೀಯವಾಗಿ ಅಪ್ಪಿಕೊಂಡರು.
ಜಾರಿ ನಿರ್ದೇಶನಾಲಯ ರಾಬರ್ಟ್ ವಾದ್ರಾ ಅವರನ್ನು ಮಂಗಳವಾರ ಐದು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಅವರ ಹೇಳಿಕೆಯನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ದಾಖಲಿಸಿಕೊಂಡಿತ್ತು. ಈ ವಿಚಾರಣೆ ಬುಧವಾರ ಕೂಡ ಮುಂದುವರಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದರು.
ಜಾರಿ ನಿರ್ದೇಶನಾಲಯದ ಈ ಕ್ರಮವನ್ನು ‘‘ರಾಜಕೀಯ ದ್ವೇಷ’’ ಎಂದು 56 ವರ್ಷದ ವಾದ್ರಾ ವ್ಯಾಖ್ಯಾನಿಸಿದ್ದಾರೆ. ನಾನು ಯಾವಾಗಲೂ ತನಿಖಾ ಸಂಸ್ಥೆಗಳೊಂದಿಗೆ ಸಹಕರಿಸಿದ್ದೇನೆ. ದೊಡ್ಡ ಪ್ರಮಾಣದ ದಾಖಲೆಗಳನ್ನು ಸಲ್ಲಿಸಿದ್ದೇನೆ. 20 ವರ್ಷಗಳ ಈ ಹಳೆಯ ಪ್ರಕರಣವನ್ನು ಅಂತ್ಯಗೊಳಿಸುವ ಅಗತ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ವಾದ್ರಾ ವಿರುದ್ಧ ನಡೆಯುತ್ತಿರುವ ತನಿಖೆ ಹರ್ಯಾಣ ಗುರುಗ್ರಾಮದ ಶಿಖೋಹ್‌ಪುರ (ಈ ಸೆಕ್ಟರ್ 83)ದ ಭೂ ವ್ಯವಹಾರಕ್ಕೆ ಸಂಬಂಧಿಸಿದೆ.
ವಾದ್ರಾ ಅವರು ಈ ಹಿಂದೆ ನಿರ್ದೇಶಕರಾಗಿದ್ದ ಸ್ಕೈಲೈಟ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪೆನಿ 2008ರಲ್ಲಿ ಭೂ ವ್ಯವಹಾರ ನಡೆಸಿತ್ತು. ಅದು ಓಂಕಾರೇಶ್ವರ ಪ್ರಾಪರ್ಟಿಸ್ ಹೆಸರಿನ ಸಂಸ್ಥೆಯಿಂದ ಶಿಖೋಹ್‌ಪುರದಲ್ಲಿ 3.5 ಎಕರೆ ಭೂಮಿಯನ್ನು 7.5 ಕೋಟಿ ರೂ.ಗೆ ಖರೀದಿಸಿತ್ತು.
ಈ ಸಂದರ್ಭ ಮುಖ್ಯಮಂತ್ರಿ ಭೂಪಿಂದರ್ ಹೂಡಾ ನೇತೃತ್ವದ ಕಾಂಗ್ರೆಸ್ ಸರಕಾರ ಅಲ್ಲಿತ್ತು. ನಾಲ್ಕು ವರ್ಷಗಳ ಬಳಿಕ 2012 ಸೆಪ್ಟಂಬರ್‌ನಲ್ಲಿ ಕಂಪೆನಿ ಈ 5.53 ಎಕರೆ ಭೂಮಿಯನ್ನು ಡಿಎಲ್‌ಎಫ್ ಕಂಪೆನಿಗೆ 58 ಕೋಟಿ ರೂ.ಗೆ ಮಾರಾಟ ಮಾಡಿತ್ತು.