ಉದ್ಯೋಗಕ್ಕಾಗಿ ಜಮೀನು ಪ್ರಕರಣ: ರಾಬ್ರಿ ದೇವಿ ಹಾಗೂ ಅವರ ಇಬ್ಬರು ಪುತ್ರಿಯರಿಗೆ ಮಧ್ಯಂತರ ಜಾಮೀನು ಮಂಜೂರು
ಹೊಸದಿಲ್ಲಿ: ರೈಲ್ವೆ ಇಲಾಖೆಯಲ್ಲಿ ನಡೆದಿದ್ದ ಉದ್ಯೋಗಕ್ಕಾಗಿ ಜಮೀನು ಹಗರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಹಾಗೂ ಅವರ ಇಬ್ಬರು ಪುತ್ರಿಯರಾದ ಮೀಸಾ ಭಾರತಿ ಮತ್ತು ಹೇಮಾ ಯಾದವ್ ಅವರಿಗೆ ಫೆಬ್ರವರಿ 28ರವರೆಗೆ ದಿಲ್ಲಿ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ರಾಬ್ರಿ ದೇವಿ ಹಾಗೂ ಅವರ ಇಬ್ಬರು ಪುತ್ರಿಯರ ಸಾಮಾನ್ಯ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ತನಗೆ ಕಾಲಾವಕಾಶ ಬೇಕು ಎಂದು ಜಾರಿ ನಿರ್ದೇಶನಾಲಯವು ಮನವಿ ಮಾಡಿದ್ದರಿಂದ ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಮೂವರಿಗೂ ಮಧ್ಯಂತರ ಜಾಮೀನು ಮಂಜೂರು ಮಾಡಿದರು.
ಇದಕ್ಕೂ ಮುನ್ನ ಆರೋಪಿಗಳ ವಿರುದ್ಧ ಜಾರಿ ನಿರ್ದೇಶನಾಲಯವು ಸಲ್ಲಿಸಿದ್ದ ದೋಷಾರೋಪ ಪಟ್ಟಿಯನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಲಯವು ಅವರಿಗೆ ತನ್ನ ಮುಂದೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದ್ದುದರಿಂದ ರಾಬ್ರಿ ದೇವಿ ಹಾಗೂ ಅವರ ಇಬ್ಬರು ಪುತ್ರಿಯರು ನ್ಯಾಯಾಲಯದೆದುರು ಹಾಜರಾಗಿದ್ದರು.
ಆರೋಪಿಗಳನ್ನು ತನಿಖೆಯ ಸಂದರ್ಭದಲ್ಲಿ ಬಂಧಿಸದೆ ಇರುವಾಗ, ಈಗೇಕೆ ಆರೋಪಿಗಳನ್ನು ವಶಕ್ಕೆ ಕೇಳುತ್ತಿದ್ದೀರಿ ಎಂದು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಜಾರಿ ನಿರ್ದೇಶನಾಲಯವನ್ನು ಪ್ರಶ್ನಿಸಿತು. ಕೊನೆಗೆ ರಾಬ್ರಿ ದೇವಿ ಮತ್ತು ಅವರ ಪುತ್ರಿಯರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತು.