ಗಾಯಕ ಬಾದ್‌ಶಾ ಒಡೆತನದ ಕ್ಲಬ್ ಸ್ಫೋಟದ ಹೊಣೆ ಹೊತ್ತ ಲಾರೆನ್ಸ್ ಬಿಷ್ಣೋಯ್ ಸಹಚರ ಗೋಲ್ಡಿ ಬ್ರಾರ್
ಚಂಡೀಗಢ: ಚಂಡೀಗಢದ ಗಾಯಕ ಮತ್ತು ರ್‍ಯಾಪರ್ ಬಾದ್‌ಶಾ ಅವರ ಬಾರ್‌ನ ಹೊರಗೆ ಸಂಭವಿಸಿದ ಸ್ಫೋಟದ ಹೊಣೆಯನ್ನು ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ನ ಸಹಚರ ಗೋಲ್ಡಿ ಬ್ರಾರ್ ಹೊತ್ತುಕೊಂಡಿದ್ದಾನೆ.
ಚಂಡೀಗಢದ ಸೆಕ್ಟರ್ 26 ಪ್ರದೇಶದಲ್ಲಿರುವ ಬಾರ್ ಹೊರಗೆ ಮಂಗಳವಾರ ಕಡಿಮೆ ತೀವ್ರತೆಯ ಬಾಂಬ್ ಸ್ಫೋಟ ಸಂಭವಿಸಿತ್ತು. ಸ್ಫೋಟದಿಂದಾಗಿ ಸಂಸ್ಥೆಯ ಗಾಜಿನ ಕಿಟಕಿಗಳು ಒಡೆದು ಹೋಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸ್ಫೋಟದ ಕೆಲವು ಗಂಟೆಗಳ ನಂತರ, ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್ ತನ್ನ ಫೇಸ್‌ಬುಕ್ ಖಾತೆ ಮೂಲಕ ಘಟನೆಯ ಹೊಣೆ ಹೊತ್ತುಕೊಂಡಿದ್ದಾನೆ.
ಫೇಸ್‌ಬುಕ್ ಪೋಸ್ಟ್‌ನ ಪ್ರಕಾರ, ಗೋಲ್ಡಿ ಬ್ರಾರ್ ಗ್ಯಾಂಗ್, ಬಾದ್‌ಶಾ ಒಡೆತನದ ಡಿಯೊರಾ ರೆಸ್ಟೋರೆಂಟ್ ಮತ್ತು ಸೆವಿಲ್ಲೆ ಬಾರ್ ಅನ್ನು ಗುರಿಯಾಗಿಸಿಕೊಂಡಿದೆ. ಹಣಕ್ಕಾಗಿ ಬಾದ್ ಶಾರನ್ನು ಫೋನ್ ಮೂಲಕ ಸಂಪರ್ಕಿಸಿದಾಗ ಅವರು ಪ್ರತಿಕ್ರಿಯಿಸಲಿಲ್ಲ ಎಂದು ಪೋಸ್ಟ್ ನಲ್ಲಿ ಹೇಳಲಾಗಿದೆ. ಆದಾಗ್ಯೂ, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ.
ಗೋಲ್ಡಿ ಬ್ರಾರ್ ಈ ಹಿಂದೆ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದು, ಆತನನ್ನು ಯುಎಪಿಎ ಕಾಯ್ದೆಯ ಅಡಿಯಲ್ಲಿ ಭಯೋತ್ಪಾದಕ ಎಂದು ಸರ್ಕಾರವು ಘೋಷಿಸಿದೆ.