ಶರ್ಟ್ ಬಟನ್ ಹಾಕದೆ ನ್ಯಾಯಾಲಯಕ್ಕೆ ಹಾಜರಾದ ವಕೀಲನಿಗೆ ಆರು ತಿಂಗಳು ಜೈಲು ಶಿಕ್ಷೆ!

ಸಾಂದರ್ಭಿಕ ಚಿತ್ರ
ಲಕ್ನೊ: 2021ರಲ್ಲಿ ವಕೀಲರ ನಿಲುವಂಗಿ ಧರಿಸದೆ ಹಾಗೂ ತಮ್ಮ ಶರ್ಟ್ ನ ಗುಂಡಿ (ಬಟನ್) ಹಾಕದೆ ನ್ಯಾಯಾಲಯಕ್ಕೆ ಹಾಜರಾಗಿ, ನ್ಯಾಯಾಂಗ ನಿಂದನೆ ಆರೋಪಕ್ಕೆ ಗುರಿಯಾಗಿದ್ದ ಸ್ಥಳೀಯ ವಕೀಲ ಅಶೋಕ್ ಪಾಂಡೆಗೆ ಅಲಹಾಬಾದ್ ಹೈಕೋರ್ಟ್ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಈ ಕುರಿತು ವಿಚಾರಣೆ ನಡೆಸಿದ ನ್ಯಾ. ವಿವೇಕ್ ಚೌಧರಿ ಹಾಗೂ ನ್ಯಾ ಬಿ.ಆರ್.ಸಿಂಗ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ, “ಆರೋಪದ ಗಂಭೀರತೆ, ಅಶೋಕ್ ಪಾಂಡೆಯ ಹಿಂದಿನ ನಡವಳಿಕೆ ಹಾಗೂ ವಿಚಾರಣೆಯಲ್ಲಿ ಪಾಲ್ಗೊಳ್ಳಲು ಅವರ ನಿರಾಕರಣೆಯ ಕಾರಣಕ್ಕೆ ಅನುಕರಣೀಯ ಶಿಕ್ಷೆ ವಿಧಿಸುವುದು ಅನಿವಾರ್ಯವಾಗಿದೆ” ಎಂದು ಅಭಿಪ್ರಾಯಪಟ್ಟಿತು.
ಈ ಶಿಕ್ಷೆಯೊಂದಿಗೆ 2,000 ರೂ. ದಂಡವನ್ನೂ ವಿಧಿಸಿದ ನ್ಯಾಯಪೀಠ, ಒಂದು ವೇಳೆ ದಂಡವನ್ನು ಪಾವತಿಸದಿದ್ದರೆ, ಒಂದು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆಯನ್ನು ಅನುಭವಿಸಬೇಕು ಎಂದೂ ಆದೇಶಿಸಿದೆ.
ಲಕ್ನೊದ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಎದುರು ಇನ್ನು ನಾಲ್ಕು ವಾರಗಳೊಳಗಾಗಿ ಹಾಜರಾಗಬೇಕು ಎಂದು ವಕೀಲ ಅಶೋಕ್ ಪಾಂಡೆಗೆ ಗಡುವು ನೀಡಲಾಗಿದೆ.
ಇದಲ್ಲದೆ, ಅಲಹಾಬಾದ್ ಹೈಕೋರ್ಟ್ ಹಾಗೂ ಅದರ ಲಕ್ನೊ ಪೀಠದಲ್ಲಿನ ವಕೀಲಿಕೆ ಅಭ್ಯಾಸದಿಂದ ನಿಮ್ಮನ್ನು ಯಾಕೆ ನಿಷೇಧಿಸಬಾರದು ಎಂದೂ ಪ್ರಶ್ನಿಸಿರುವ ನ್ಯಾಯಪೀಠ, ಈ ಸಂಬಂಧ ಆಶೋಕ್ ಪಾಂಡೆಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.