ಉತ್ತರಾಖಂಡ ತೊರೆಯಿರಿ, ಇಲ್ಲವೆ ಪರಿಣಾಮ ಎದುರಿಸಿ: ಹಿಂದೂ ರಕ್ಷಾ ದಳದ ದ್ವೇಷದ ಅಭಿಯಾನದ ಒತ್ತಡಕ್ಕೆ ಕಾಲೇಜುಗಳನ್ನು ತೊರೆದ ಕಾಶ್ಮೀರಿ ವಿದ್ಯಾರ್ಥಿಗಳು

Update: 2025-04-24 20:42 IST
ಉತ್ತರಾಖಂಡ ತೊರೆಯಿರಿ, ಇಲ್ಲವೆ ಪರಿಣಾಮ ಎದುರಿಸಿ: ಹಿಂದೂ ರಕ್ಷಾ ದಳದ ದ್ವೇಷದ ಅಭಿಯಾನದ ಒತ್ತಡಕ್ಕೆ ಕಾಲೇಜುಗಳನ್ನು ತೊರೆದ ಕಾಶ್ಮೀರಿ ವಿದ್ಯಾರ್ಥಿಗಳು

Screengrab:X/@NasirKhuehami

  • whatsapp icon

ಡೆಹ್ರಾಡೂನ್: “ಶುಕ್ರವಾರ ಬೆಳಗ್ಗೆ 10 ಗಂಟೆಯೊಳಗೆ ಉತ್ತರಾಖಂಡವನ್ನು ತೊರೆಯಿರಿ, ಇಲ್ಲವೆ ಪರಿಣಾಮ ಎದುರಿಸಿ” ಎಂದು ಹಿಂದೂ ರಕ್ಷಾ ದಳ ನಾಯಕರು ಎಚ್ಚರಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದರ ಬೆನ್ನಿಗೇ ಭದ್ರತೆಯನ್ನು ಬಿಗಿಗೊಳಿಸಿರುವ ಡೆಹ್ರಾಡೂನ್ ಪೊಲೀಸರು, 25 ಪ್ರಚೋದನಾಕಾರಿ ಆನ್ ಲೈನ್ ಪೋಸ್ಟ್ ಗಳನ್ನು ತೆಗೆದು ಹಾಕಿದ್ದಾರೆ.

The Indian Express ವರದಿಯ ಪ್ರಕಾರ, “ಪಹಲ್ಗಾಮ್ ನಲ್ಲಿ ನಡೆದಿರುವ ಘಟನೆಯಿಂದ ನಮಗೆ ನೋವಾಗಿದೆ. ನಾಳೆ (ಶುಕ್ರವಾರ) ಬೆಳಗ್ಗೆ 10 ಗಂಟೆಯ ನಂತರ ನಾವೇನಾದರೂ ಉತ್ತರಾಖಂಡದಲ್ಲಿ ಕಾಶ್ಮೀರಿ ಮುಸ್ಲಿಮರನ್ನು ನೋಡಿದರೆ, ಅವರಿಗೆ ಸರಿಯಾದ ಶಾಸ್ತಿ ಮಾಡಲಾಗುವುದು. ನಾಳೆ ಕಾಶ್ಮೀರಿ ಮುಸ್ಲಿಮರಿಗೆ ಈ ಶಾಸ್ತಿ ಮಾಡಲು ನಮ್ಮೆಲ್ಲ ಕಾರ್ಯಕರ್ತರು ತಮ್ಮ ಮನೆಗಳನ್ನು ತೊರೆಯಲಿದ್ದಾರೆ. ಸರಕಾರ ಕ್ರಮ ಕೈಗೊಳ್ಳುವುದನ್ನು ನಾವು ಕಾಯುತ್ತಾ ಕೂರುವುದಿಲ್ಲ” ಎಂದು ಈ ವಿಡಿಯೊದಲ್ಲಿ ಹಿಂದೂ ರಕ್ಷಾ ದಳದ ನಾಯಕ ಲಲಿತ್ ಶರ್ಮ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ, ಕಾಶ್ಮೀರಿ ಮುಸ್ಲಿಮರೇನಾದರೂ ಶುಕ್ರವಾರ ಬೆಳಗ್ಗೆ 10 ಗಂಟೆಯೊಳಗೆ ಉತ್ತರಾಖಂಡ ತೊರೆಯದಿದ್ದರೆ, ಅವರು ಊಹಿಸಲೂ ಸಾಧ್ಯವಾಗದಂಥ ಕ್ರಮವನ್ನು ಎದುರಿಸಲಿದ್ದಾರೆ ಎಂದೂ ಪುನರುಚ್ಚರಿಸಿದ್ದಾರೆ.

ಈ ಬೆದರಿಕೆಯಿಂದ ಡೆಹ್ರಾಡೂನ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಕಾಶ್ಮೀರಿ ವಿದ್ಯಾರ್ಥಿಗಳು ತಕ್ಷಣವೇ ಕಳವಳಕ್ಕೀಡಾಗಿದ್ದಾರೆ. ಡೆಹ್ರಾಡೂನಿನ ಸ್ನಾತಕೋತ್ತರ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಕನಿಷ್ಠ ಪಕ್ಷ ಐದು ಮಂದಿ ಕಾಶ್ಮೀರಿ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳನ್ನು ಅರ್ಧದಲ್ಲೇ ತೊರೆದು, ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ ಎಂದು ಅದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.

“ಇಂದು ಹದಿನೈದು ವಿದ್ಯಾರ್ಥಿಗಳಿಗೆ ಪರೀಕ್ಷೆ ಇತ್ತು. ನಾವೆಲ್ಲ ಕಾಲೇಜಿಗೆ ಆಗಮಿಸಿದ್ದೆವು. ಆದರೆ, ಅವರೆಲ್ಲ ಬಲಪಂಥೀಯ ಹಿಂದುತ್ವವಾದಿ ಗುಂಪುಗಳಿಂದ ಬೆದರಿಕೆ ಎದುರಿಸುತ್ತಿದ್ದಾರೆ” ಎಂದು ಆ ವಿದ್ಯಾರ್ಥಿ ತಿಳಿಸಿದ್ದಾರೆ ಎಂದು The Indian Express ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದೇ ರೀತಿ, ಉತ್ತರಾಖಂಡ ತೊರೆಯುವಂತೆ ಗಡುವು ಸ್ವೀಕರಿಸಿದ ನಂತರ, ನಾನು ಹಾಗೂ ನನ್ನ ಸ್ನೇಹಿತರು ಗುರುವಾರ ಸಂಜೆ ವಿಮಾನ ಟಿಕೇಟು ಕಾಯ್ದಿರಿಸಿದ್ದೇವೆ ಎಂದು ಡೆಹ್ರಾಡೂನ್ ನ ಬಿಎಫ್ಐಟಿ ಕಾಲೇಜಿನಲ್ಲಿ ಎರಡನೆ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ. ಕಾಲೇಜಿನಿಂದ 50 ಕಿಮೀ ದೂರವಿರುವ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ನಮ್ಮ ಪ್ರಾಧ್ಯಾಪಕರು ನಮಗೆ ಸಲಹೆ ನೀಡಿದ್ದಾರೆ ಎಂದೂ ಆ ವಿದ್ಯಾರ್ಥಿ ತಿಳಿಸಿದ್ದಾರೆ.

“ಅವರು ನಮ್ಮನ್ನು ಚಂಡೀಗಢಕ್ಕೆ ರವಾನಿಸುವ ಕುರಿತು ಯೋಚಿಸುತ್ತಿದ್ದರು. ಆದರೆ, ನಾವು ಗುರುವಾರ ಮುಂಜಾನೆ ಸುಮಾರು 2 ಗಂಟೆ ವೇಳೆಗೆ ಕ್ಯಾಂಪಸ್ ತೊರೆದು, ವಿಮಾನದಲ್ಲಿ ದಿಲ್ಲಿಗೆ ತೆರಳುವ ನಿರ್ಧಾರ ಕೈಗೊಂಡೆವು. ನಮ್ಮ ಪ್ರಾಧ್ಯಾಪಕರು ನಮಗೆ ಕಾರು ಹಾಗೂ ಅಂಗರಕ್ಷಕನನ್ನು ಒದಗಿಸಿದರು” ಎಂದು ಆ ವಿದ್ಯಾರ್ಥಿ ಹೇಳಿದ್ದಾರೆ. ನಮ್ಮ ಬೇಸಿಗೆ ರಜೆ ಶೀಘ್ರದಲ್ಲೇ ಪ್ರಾರಂಭಗೊಳ್ಳುವುದರಿಂದ, ಸೆಪ್ಟೆಂಬರ್ ವರೆಗೆ ನಾವು ಕಾಶ್ಮೀಗರದಲ್ಲೇ ಉಳಿಯಲಿದ್ದೇವೆ” ಎಂದೂ ಆ ವಿದ್ಯಾರ್ಥಿ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಸಿಂಗ್, “ಕಾಶ್ಮೀರಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಾತರಿ ಪಡಿಸಲು ನಾವು ಕಾಲೇಜಿನ ಡೀನ್ ಹಾಗೂ ವಾರ್ಡನ್ ಗಳೊಂದಿಗೆ ನೇರ ಸಂಪರ್ಕದಲ್ಲಿದ್ದೇವೆ. ಎಲ್ಲ ವಿದ್ಯಾರ್ಥಿಗಳಿಗೂ ರಕ್ಷಣೆಯ ಭರವಸೆ ನೀಡಲಾಗಿದ್ದು, ಯಾರೇ ಕಾನೂನನ್ನು ಉಲ್ಲಂಘಿಸಿದರೂ, ಅಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

ಈ ನಡುವೆ, ಈ ಕುರಿತು ಗುರುವಾರ ಪ್ರತಿಕ್ರಿಯಿಸಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಕಾಶ್ಮೀರಿ ಪ್ರಜೆಗಳು ಎಲ್ಲೆಲ್ಲಿ ಕಿರುಕುಳವನ್ನು ಎದುರಿಸುತ್ತಿದ್ದಾರೊ, ಅಂತಹ ರಾಜ್ಯಗಳ ಸರಕಾರಗಳೊಂದಿಗೆ ನಮ್ಮ ಸರಕಾರ ಸಂಪರ್ಕದಲ್ಲಿದೆ ಎಂದು ಹೇಳಿದ್ದಾರೆ.

“ಇಂತಹ ವರದಿಗಳು ಬರುತ್ತಿರುವ ರಾಜ್ಯಗಳ ಸರಕಾರಗಳೊಂದಿಗೆ ಜಮ್ಮು ಮತ್ತು ಕಾಶ್ಮೀನರ ಸರಕಾರ ಸಂಪರ್ಕದಲ್ಲಿದೆ. ನಾನೂ ಕೂಡಾ ಈ ರಾಜ್ಯಗಳಲ್ಲಿನ ಮುಖ್ಯಮಂತ್ರಿಗಳೊಂದಿಗೆ ಸಂಪರ್ಕದಲ್ಲಿದ್ದು, ಈ ಕುರಿತು ಹೆಚ್ಚಿನ ಕಾಳಜಿ ವಹಿಸುವಂತೆ ಅವರಲ್ಲಿ ಮನವಿ ಮಾಡಿದ್ದೇನೆ” ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News