ತಪ್ಪು ಸುದ್ದಿ ಬಿಟ್ಟು ಸರಿಯಾದ ಸುದ್ದಿ ತೋರಿಸಿ: ಸುಧೀರ್‌ ಚೌಧರಿಗೆ ಪರೋಕ್ಷ ಸವಾಲು ಹಾಕಿದ ಗಾಯಕ ದಿಲ್ಜಿತ್‌

Update: 2024-11-23 07:13 GMT

ಸುದ್ದಿ ನಿರೂಪಕ ಸುಧೀರ್‌ ಚೌಧರಿ,ಗಾಯಕ ದಿಲ್ಜಿತ್ ದೋಸಾಂಜ್ | PC : X

ಹೊಸದಿಲ್ಲಿ: ಪಂಜಾಬಿ ಮೂಲದ ಗಾಯಕ ದಿಲ್ಜಿತ್ ದೋಸಾಂಜ್ ಅವರು ತಮ್ಮ ಭಾರತ ಪ್ರವಾಸದಿಂದಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಮದ್ಯ ಕುರಿತ ಹಾಡಿನ ವಿವಾದದ ಬಳಿಕ, ಇದೀಗ ಸುದ್ದಿ ನಿರೂಪಕ ಸುಧೀರ್‌ ಚೌಧರಿ ಅವರಿಗೆ ಪರೋಕ್ಷ ಸವಾಲು ಹಾಕಿರುವ ದಿಲ್ಜಿತ್‌ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಜನರ ಗಮನ ಸೆಳೆದಿದ್ದಾರೆ.

ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಚೇರಿಗಳು ದೇಶಾದ್ಯಂತ ನಡೆಯುತ್ತಿದ್ದು, ಮದ್ಯವನ್ನು ಪ್ರೋತ್ಸಾಹಿಸುವಂತಹ ಹಾಡುಗಳನ್ನು ಹಾಡಬಾರದೆಂದು ತೆಲಂಗಾಣ ಸರ್ಕಾರ ಗಾಯಕನಿಗೆ ನೋಟಿಸ್‌ ನೀಡಿತ್ತು. ಇದಕ್ಕೆ ದಿಲ್ಜಿತ್‌ ನೀಡಿದ ಉತ್ತರ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಆಲ್ಕೋಹಾಲ್ ಬಗ್ಗೆ ಉಲ್ಲೇಖವಿರುವ ಹಾಡುಗಳನ್ನು ಹಾಡುವುದನ್ನು ರಾಜ್ಯ ಸರ್ಕಾರ ನಿಷೇಧಿಸಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ದಿಲ್ಜಿತ್, ಎಲ್ಲ ರಾಜ್ಯಗಳಲ್ಲಿ ಮದ್ಯ ನಿಷೇಧ ಮಾಡಿದರೆ ನಾನೂ ಕೂಡ ಮದ್ಯದ ಮೇಲೆ ಹಾಡು ಮಾಡುವುದಿಲ್ಲ.‌ ಒಣ ರಾಜ್ಯವಾಗಿರುವ ಗುಜರಾತಿನಲ್ಲಿ ತಾನು ಮದ್ಯದ ಬಗ್ಗೆ ಹಾಡುವುದಿಲ್ಲ ಎಂದು ಹೇಳಿದ್ದರು.

ಈ ನಡುವೆ, ಸುಧೀರ್‌ ಚೌಧರಿ ತಮ್ಮ ಕಾರ್ಯಕ್ರಮದಲ್ಲಿ ದಿಲ್ಜಿತ್‌ ಅವರಿಗೆ ಸವಾಲು ಹಾಕಿದ್ದು, ʼಮದ್ಯವನ್ನು ಪ್ರೋತ್ಸಾಹಿಸುವ ರೀತಿಯಲ್ಲಿ ಹಾಡುವುದಿಲ್ಲ ಎಂದು ಪ್ರತಿಜ್ಞೆ ಕೈಗೊಂಡಂತೆ, ಅಶ್ಲೀಲ ಹಾಡುವುದಿಲ್ಲ, ಅಪರಾಧವನ್ನು ಪ್ರೋತ್ಸಾಹಿಸುವಂತೆ ಹಾಡುವುದಿಲ್ಲʼ ಎಂದು ಪ್ರತಿಜ್ಞೆ ಕೈಗೊಳ್ಳಬೇಕೆಂದು ಸವಾಲು ಹಾಕಿದ್ದರು. ಅಲ್ಲದೆ, ಸೃಜನಶೀಲತೆ ಇಲ್ಲದವರು ಅಶ್ಲೀಲ, ಮದ್ಯ, ಅಪರಾಧವನ್ನು ಪ್ರೋತ್ಸಾಹಿಸುವ ರೀತಿಯಲ್ಲಿ ಕಳಪೆ ದರ್ಜೆಯ ಹಾಡುಗಳನ್ನು ರಚಿಸುತ್ತಾರೆ ಎಂದೂ ಸುಧೀರ್‌ ತಮ್ಮ ಕಾರ್ಯಕ್ರಮದಲ್ಲಿ ಹೇಳಿದ್ದರು.

ಈ ಕುರಿತು ಲಕ್ನೋದಲ್ಲಿ ನಡೆದ ತಮ್ಮ ಕಾರ್ಯಕ್ರಮದಲ್ಲಿ ಪ್ರತಿಕ್ರಿಯಿಸಿರುವ ದಿಲ್ಜಿತ್ ಅವರು, ʼತಪ್ಪು ಸುದ್ದಿಗಳನ್ನು ಬಿಟ್ಟು, ಸರಿಯಾದ ಸುದ್ದಿಯನ್ನು ತೋರಿಸಲು ನಾನು ನಿಮಗೆ ಸವಾಲು ಹಾಕುತ್ತೇನೆʼ ಎಂದು ಸುಧೀರ್‌ ಅವರ ಹೆಸರು ಉಲ್ಲೇಖಿಸದೆಯೇ ಹೇಳಿದ್ದಾರೆ.

“ನಾನು ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ ಏಕೆಂದರೆ ನಾನು ಯಾರ ವಿರುದ್ಧವೂ ಇಲ್ಲ. ನಾನು ಎಲ್ಲರನ್ನೂ ಪ್ರೀತಿಸುತ್ತೇನೆ. ಟಿವಿಯಲ್ಲಿ ಒಬ್ಬರು ಆ್ಯಂಕರ್ ಆಲ್ಕೋಹಾಲ್ ಇಲ್ಲದ ಹಿಟ್ ಸಾಂಗ್ ಅನ್ನು ತೋರಿಸಿ ಅಂತ ದಿಲ್ಜಿತ್‌ ಗೆ ಚಾಲೆಂಜ್ ಮಾಡಿದ್ದಾರೆ. ಸರ್ ನಿಮ್ಮ ಮಾಹಿತಿಗಾಗಿ ʼಬಾರ್ನ್ ಟು ಶೈನ್ʼ, GOAT, ಲವರ್, ನೈನಾ, ಪಟಿಯಾಲಾ ಪೆಗ್‌ ...(ದಿಲ್ಜಿತ್ ಅವರ ಹಾಡುಗಳು)” ಎಂದು ದಿಲ್ಜಿತ್‌ ಪ್ರತಿಕ್ರಿಯಿಸಿದ್ದಾರೆ.

ಮುಂದುವರಿದು, “ಸರ್, ನಾನು ಮಾಡಿದ ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ ಕೂಡ ಬಂದಿದೆ, ಹಾಗಾಗಿ ನನ್ನ ಕೆಲಸವು ಅಗ್ಗದ ಕೆಲಸವಲ್ಲ. ನೀವು ಈ ತಪ್ಪು ಸುದ್ದಿಯನ್ನು ಹರಡಿದರೆ ಅದನ್ನು ನಕಲಿ ಸುದ್ದಿ ಎಂದು ಕರೆಯಲಾಗುತ್ತದೆ ಮತ್ತು ನಕಲಿ ಸುದ್ದಿಗಳನ್ನು ಹರಡುವುದರಿಂದ ನನಗೆ ನೋವಾಗಿದೆಯೇ? ಇಲ್ಲ. ನಾನು ಕೋಪಗೊಂಡಿದ್ದೇನೆಯೇ? ಇಲ್ಲ. ಸರಿಯಾದ ಸುದ್ದಿಯನ್ನು ಹರಡುವುದು ನಿಮ್ಮ ನೈತಿಕ ಜವಾಬ್ದಾರಿ. ಹಾಗಾಗಿ ಸರಿಯಾದ ಸುದ್ದಿಯನ್ನು ತೋರಿಸಲು ನಾನು ನಿಮಗೆ ಸವಾಲು ಹಾಕುತ್ತೇನೆ” ಎಂದು ದಿಲ್ಜಿತ್‌ ಹೇಳಿದ್ದಾರೆ.

ದಿಲ್ಜಿತ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ದಿಲ್ಜಿತ್ ಯಾವುದೇ ಆ್ಯಂಕರ್ ಹೆಸರನ್ನು ತೆಗೆದುಕೊಂಡಿಲ್ಲವಾದರೂ, ಸಾಮಾಜಿಕ ಮಾಧ್ಯಮ ಬಳಕೆದಾರರು ದಿಲ್ಜಿತ್ ಅವರ ವಿಡಿಯೋದ ಕೆಳಗೆ ಆಜ್ ತಕ್ ಆಂಕರ್ ಸುಧೀರ್ ಚೌಧರಿ ಅವರನ್ನು ಉಲ್ಲೇಖಿಸಿದ್ದಾರೆ. ಸುಧೀರ್ ಚೌಧರಿ ಅವರನ್ನು ಟ್ಯಾಗ್ ಮಾಡಿರುವ ಜನರು, ʼಸರ್ ದಯವಿಟ್ಟು ದಿಲ್ಜಿತ್ ಅವರ ಸವಾಲನ್ನು ಪೂರ್ಣಗೊಳಿಸಿʼ ಎಂದು ವ್ಯಂಗ್ಯವಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News