“ಅದಾನಿ ತನ್ನನ್ನು ಸ್ವತಃ ಸಮರ್ಥಿಸಿಕೊಳ್ಳಲಿ”: ಅಂತರ ಕಾಯ್ದುಕೊಂಡ ಬಿಜೆಪಿ

Update: 2024-11-27 12:32 GMT

ಗೌತಮ್ ಅದಾನಿ | PC : PTI

ಹೊಸದಿಲ್ಲಿ: ಭಾರತದಲ್ಲಿ ವಿದ್ಯುತ್ ಒಪ್ಪಂದವನ್ನು ಮಾಡಿಕೊಳ್ಳಲು ಲಂಚ ನೀಡಿದ ಆರೋಪದಲ್ಲಿ ಭಾರತೀಯ ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕ ದೋಷಾರೋಪ ಹೊರಿಸಿರುವ ಬೆನ್ನಿಗೇ, ಅವರಿಂದ ಅಂತರ ಕಾಯ್ದುಕೊಂಡಿರುವ ಬಿಜೆಪಿ, ನಮಗೆ ಗೌತಮ್ ಅದಾನಿಯನ್ನು ಸಮರ್ಥಿಸಿಕೊಳ್ಳಲು ಯಾವುದೇ ಕಾರಣಗಳಿಲ್ಲ ಎಂದು ಮಂಗಳವಾರ ಹೇಳಿದೆ.

ದೇಶದಲ್ಲಿ ನಡೆದಿರುವ ವ್ಯವಹಾರಗಳ ಕುರಿತು ಸ್ವತಂತ್ರ ತನಿಖೆ ನಡೆಯದಂತೆ ತಡೆಗೋಡೆ ನಿರ್ಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ, ಅದಾನಿಯನ್ನು ರಕ್ಷಿಸುತ್ತಿದ್ದಾರೆ ಎಂದು ವಿರೋಧ ಪಕ್ಷವಾದ ಕಾಂಗ್ರೆಸ್ ಆರೋಪಿಸಿದೆ. ಆದರೆ, ಈ ಆರೋಪಗಳನ್ನು ಬಿಜೆಪಿ ಅಲ್ಲಗಳೆದಿದೆ.

“ಅದಾನಿಯನ್ನು ಸಮರ್ಥಿಸಬೇಕಾದ ಅಗತ್ಯ ನಮಗಿಲ್ಲ ಹಾಗೂ ನಾವಿದರಲ್ಲಿ ಭಾಗಿಯಾಗಿಲ್ಲ. ಅವರೇ ತಮ್ಮನ್ನು ಸಮರ್ಥಿಸಿಕೊಳ್ಳಲಿ” ಎಂದು ಫೋನ್ ಕರೆಯ ಮೂಲಕ Reuters ಸುದ್ದಿ ಸಂಸ್ಥೆಗೆ ತಿಳಿಸಿರುವ ಬಿಜೆಪಿ ವಕ್ತಾರ ಗೋಪಾಲ್ ಕೃಷ್ಣ ಅಗರ್ವಾಲ್, “ನಾವು ಉದ್ಯಮಿಗಳ ವಿರುದ್ಧವಿಲ್ಲ. ನಾವು ಅವರನ್ನು ರಾಷ್ಟ್ರ ನಿರ್ಮಾಣದ ಪಾಲುದಾರರು ಎಂದು ಭಾವಿಸಿದ್ದೇವೆ. ಒಂದು ವೇಳೆ ಅವರೇನಾದರೂ ತಪ್ಪು ಮಾಡಿದ್ದರೆ, ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳಲಿದೆ” ಎಂದು ಹೇಳಿದ್ದಾರೆ.

ರಾಜ್ಯದಲ್ಲಿನ ಅದಾನಿ ಸಮೂಹಕ್ಕೆ ಸಂಬಂಧಿಸಿದ ವಿದ್ಯುತ್ ಸರಬರಾಜು ಗುತ್ತಿಗೆಯನ್ನು ರದ್ದುಗೊಳಿಸಲು ಸಾಧ್ಯವೆ ಎಂಬುದನ್ನು ಪರಿಶೀಲಿಸಲಾಗುವುದು ಎಂದು ಬಿಜೆಪಿಯನ್ನೂ ಮೈತ್ರಿಕೂಟದಲ್ಲಿ ಹೊಂದಿರುವ ಆಂಧ್ರಪ್ರದೇಶದ ಟಿಡಿಪಿ ಸರಕಾರ ಹೇಳಿಕೆ ನೀಡಿದ ಬೆನ್ನಿಗೇ, ಅಗರ್ವಾಲ್ ರಿಂದ ಈ ಹೇಳಿಕೆ ಹೊರ ಬಿದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News