ಮದ್ಯ ನೀತಿ ಹಗರಣ: ಸಿಸೋಡಿಯಾ ರಿಮಾಂಡ್ ಅವಧಿ ಎ.18ರವರೆಗೆ ವಿಸ್ತರಣೆ
ಹೊಸದಿಲ್ಲಿ: ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದ ಕಪ್ಪುಹಣ ಬಿಳುಪು ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ರಿಮಾಂಡ್ ಅವಧಿಯನ್ನು ದಿಲ್ಲಿಯ ರೌಸ್ ಅವೆನ್ಯೂ ನ್ಯಾಯಾಲಯವು ಎಪ್ರಿಲ್ 18ರವರೆಗೆ ವಿಸ್ತರಿಸಿದೆ. ಇದೇ ಪ್ರಕರಣದ ಇನ್ನೋರ್ವ ಆರೋಪಿ, ಇತ್ತೀಚೆಗೆ ಜಾಮೀನು ಬಿಡುಗಡೆಗೊಂಡ ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಅವರು ಕೂಡಾ ನ್ಯಾಯಾಲಯದ ವಿಚಾರಣೆಗೆ ಹಾಜರಾದರು.
ಈ ಮೊದಲು ಸಿಸೋಡಿಯಾ ಅವರಿಗೆ ವಿಧಿಸಲಾಗಿದ್ದ ನ್ಯಾಯಾಂಗ ಕಸ್ಟಡಿಯ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಸಿಸೋಡಿಯಾರ ನ್ಯಾಯಾಂಗ ಬಂಧನವನ್ನು ಎಪ್ರಿಲ್ 18ರವರೆಗೆ ವಿಸ್ತರಿಸಿದರು.
ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೂ ಈ ಪ್ರಕರಣದಲ್ಲಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮದ್ಯ ನೀತಿ ಪರಿಷ್ಕರಣೆ ಹಗರಣದಲ್ಲಿ ಶಾಮೀಲಾದ ಆರೋಪದಲ್ಲಿ ಸಿಸೋಡಿಯಾ ಅವರನ್ನು ಫೆಬ್ರವರಿ 26ರಂದು ಬಂಧಿಸಲಾಗಿತ್ತು. ಈ ಹಗರಣದಲ್ಲಿ ನಡೆದಿತ್ತೆನ್ನಲಾದ ಕಪ್ಪುಹಣ ಬಿಳುಪು ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ದಾಖಲಿಸಿದ ಎಫ್ಐಆರ್ ಅನ್ನು ಆಧರಿಸಿ ಜಾರಿ ನಿರ್ದೇಶನಾಲಯವು ಸಿಸೋಇಯಾ ಅವನ್ನು 2023ರ ಮಾರ್ಚ್ 9ರಂದು ತನ್ನ ವಶಕ್ಕೆ ತೆಗೆದುಕೊಂಡಿತ್ತು.
ದಿಲ್ಲಿ ಮದ್ಯನೀತಿ ಪರಿಷ್ಕರಣೆಯನ್ನು ನಡೆಸುವಾಗ ಭಾರೀ ಅವ್ಯವಹಾರಗಳನ್ನು ಎಸಗಲಾಗಿದೆ ಯೆಂದು ಸಿಬಿಐ ಆಪಾದಿಸಿತ್ತು. ಲೈಸನ್ಸ್ದಾರರಿಗೆ ಅನುಚಿತವಾದ ರೀತಿಯಲ್ಲಿ ಪ್ರಯೋಜನಗಳನ್ನು ಮಾಡಿಕೊಡಲಾಗಿದೆ, ಸಕ್ಷಮ ಪ್ರಾಧಿಕಾರದ ಅನುಮೋದನೆ ಇಲ್ಲದೆಯೇ ಲೈಸನ್ಸ್ ಶುಲ್ಕಗಳನ್ನು ರದ್ದುಪಡಿಸಲಾಗಿದೆ ಇಲ್ಲವೇ ಕಡಿಮೆಗೊಳಿಸಲಾಗಿದೆ. ಅಥವಾ ಲೈಸನ್ಸ್ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಆರೋಪಿಸಿತ್ತು.
ಈ ಮಧ್ಯೆ ಸಿಸೋಡಿಯಾ ಅವರು ತಿಹಾರ್ ಜೈಲಿನಿಂದ ಬಹಿರಂಗ ಪತ್ರವೊಂದನ್ನು ಬರೆದಿದ್ದು, ‘‘ಶೀಘ್ರದಲ್ಲೇ ಹೊರಗಿನಿಂದ ನಿಮ್ಮೆಲ್ಲನ್ನೂ ಭೇಟಿಯಾಗಲಿದ್ದೇವೆ. ಬ್ರಿಟಿಶ್ ಆಡಳಿತಗಾರರಿಗೆ ಅಧಿಕಾರದ ಧಾರ್ಷ್ಯ್ಯವೂ ಇದೆ ಹಾಗೂ ಸುಳ್ಳು ಪ್ರಕರಣಗಳಲ್ಲಿ ಜನರನ್ನು ಜೈಲಿಗೆ ಕಳುಹಿಸುತ್ತಿದ್ದಾರೆ ’’ ಎಂದು ಹೇಳಿದ್ದಾರೆ. ಹಲವು ವರ್ಷ ಜೈಲು ವಾಸ ಅನುಭವಿಸಿದ ಮಹಾತ್ಮಾಗಾಂಧಿ ಹಾಗೂ ನೆಲ್ಸನ್ ಮಂಡೇಲಾ ಅವರು ತನಗೆ ಸ್ಫೂರ್ತಿಯಾಗಿದ್ದಾರೆ ಎಂದರು.