ಲೋಕಸಭಾ ಚುನಾವಣೆ: ಮತದಾನ ಪ್ರಮಾಣದ ಸ್ವಾರಸ್ಯಕರ ಮಾಹಿತಿ...
ಹೊಸದಿಲ್ಲಿ: ಪ್ರಸಕ್ತ ಲೋಕಸಭಾ ಚುನಾವಣೆಯ ಪ್ರಕ್ರಿಯೆಗಳು ಮುಗಿದಿದ್ದು, ದೇಶದ 97.6 ಕೋಟಿ ಮತದಾರರ ಪೈಕಿ ಶೇಕಡ 65.8ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಶೇಕಡ 67.1ರಷ್ಟು ಮತದಾನವಾಗಿದ್ದು, ಇದಕ್ಕೆ ಹೋಲಿಸಿದರೆ ಇದು ಶೇಕಡ 1.6ರಷ್ಟು ಕಡಿಮೆ.
ದೇಶದ 36 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೈಕಿ 19 ಕಡೆಗಳಲ್ಲಿ ಮಹಿಳೆಯರ ಮತಪ್ರಮಾಣ ಪುರುಷರಿಗಿಂತ ಅಧಿಕ. ಆದರೆ ರಾಷ್ಟ್ರಮಟ್ಟದಲ್ಲಿ ಒಟ್ಟಾರೆಯಾಗಿ ಮತದಾನ ಮಾಡಿದ ಪುರುಷರ ಪ್ರಮಾಣ ಶೇ. 65.8ರಷ್ಟಿದ್ದರೆ, ಒಟ್ಟು ಮತದಾನ ಮಾಡಿದ ಮಹಿಳೆಯರ ಪ್ರಮಾಣ ಶೇಕಡ 65.7ರಷ್ಟಿದೆ. ಈ ಒಟ್ಟಾರೆ ಮತಪ್ರಮಾಣವನ್ನು ಇವಿಎಂ ಮತಗಳನ್ನು ಆಧರಿಸಿ ನೀಡಲಾಗಿದ್ದು, ಇದರಲ್ಲಿ ಅಂಚೆ ಮತಗಳು ಸೇರಿಲ್ಲ ಎನ್ನುವುದನ್ನು ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
2024ರ ಚುನಾವಣೆಯ ಮತದಾನ ಪ್ರಮಾಣ ಬಗೆಗಿನ ಅಧಿಕೃತ ಪ್ರಕಟಣೆ, ಚುನಾವಣಾ ಆಯೋಗ ರಾಷ್ಟ್ರಪತಿಗಳಿಗೆ ನೂತನ ಸಂಸದರ ಪಟ್ಟಿಯನ್ನು ಕಳುಹಿಸುವ ಸಂದರ್ಭದಲ್ಲಿ ಹೊರಬಿದ್ದಿದೆ. ಬಳಿಕ ಈ ಚುನಾವಣೆಯನ್ನು ಮಹಾತ್ಮಗಾಂಧಿಯವರಿಗೆ ಸಮರ್ಪಿಸುವ ಸಲುವಾಗಿ ಆಯೋಗದ ಆಯುಕ್ತರು ರಾಜ್ ಘಾಟ್ ಗೆ ತೆರಳಿದರು.
ಲಕ್ಷದ್ವೀಪದಲ್ಲಿ ಗರಿಷ್ಠ ಅಂದರೆ ಶೇಕಡ 84.2ರಷ್ಟು ಮತದಾನವಾಗಿದ್ದರೆ, ಬಿಹಾರದಲ್ಲಿ ಕನಿಷ್ಠ ಅಂದರೆ 56.2% ಮತದಾನವಾಗಿದೆ. ಗುಜರಾತ್ ನಲ್ಲಿ ಮಹಿಳೆಯರು ಅತ್ಯಂತ ಕಡಿಮೆ ಅಂದರೆ 56.6% ಮಂದಿ ಮಾತ್ರ ಮತ ಚಲಾಯಿಸಿದ್ದಾರೆ. ಪುರುಷರು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮತ ಚಲಾಯಿಸಿರುವುದು ಬಿಹಾರದಲ್ಲಿ. ಇಲ್ಲಿ ಪುರುಷರು ಶೇಕಡ 53.3ರಷ್ಟು ಮಂದಿ ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದಾರೆ.