ಲೋಕಸಭಾ ಚುನಾವಣೆ: ಅಭ್ಯರ್ಥಿಗಳ ಆಯ್ಕೆಗೆ ಮಾರ್ಚ್ 7ರಂದು ಕಾಂಗ್ರೆಸ್ ಸಭೆ
ಹೊಸದಿಲ್ಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಪಡಿಸುವ ಸಲುವಾಗಿ ಕಾಂಗ್ರೆಸ್ ನ ಕೇಂದ್ರೀಯ ಚುನಾವಣಾ ಸಮಿತಿ ಮಾರ್ಚ್ 7ರಂದು ಸಭೆ ಸೇರಲಿದೆ. ಲೋಕಸಭಾ ಚುನಾವಣೆಯ ದಿನಾಂಕ ಇನ್ನೂ ಪ್ರಕಟವಾಗಬೇಕಿದೆ. ಆದರೆ ಈಗಾಗಲೇ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿರುವ ಬಿಜೆಪಿ ಒಂದು ಹೆಜ್ಜೆ ಮುಂದಿದೆ.
ಅಭ್ಯರ್ಥಿಗಳು ತಮ್ಮ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಲು ಅನುವು ಮಾಡಿಕೊಡಲು ಪಕ್ಷವು ಶೀಘ್ರದಲ್ಲೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಹಲವು ರಾಜ್ಯಗಳಲ್ಲಿ ಈಗಾಗಲೇ ಆಯಾ ಸ್ಕ್ರೀನಿಂಗ್ ಕಮಿಟಿಗಳ ಜತೆ ಸಭೆಗಳನ್ನು ನಡೆಸಲಾಗಿದ್ದು, ಆಯಾ ರಾಜ್ಯಗಳ ಪಟ್ಟಿಯನ್ನು ಕಳುಹಿಸಿಕೊಟ್ಟಿವೆ ಎಂದು ತಿಳಿದುಬಂದಿದೆ. ಇದನ್ನು ಪಕ್ಷದ ಕೇಂದ್ರ ನಾಯಕತ್ವ, ಕೇಂದ್ರೀಯ ಚುನಾವಣಾ ಸಮಿತಿ ಸಭೆಯಲ್ಲಿ ಅಂತಿಮಪಡಿಸಲಿದೆ.
ಮಲ್ಲಿಕಾರ್ಜುಜ ಖರ್ಗೆ ನೇತೃತ್ವದ ಸಮಿತಿಯಲ್ಲಿ ಪಕ್ಷದ ಮುಖಂಡರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಅಂಬಿಕಾ ಸೋನಿ, ಅಧೀರ್ ರಂಜನ್ ಚೌಧರಿ ಹಾಗೂ ಟಿ.ಎಸ್.ಸಿಂಗ್ ದೇವ್ ಇರುತ್ತಾರೆ.
ಈ ಮಧ್ಯೆ ರಾಜಸ್ಥಾನದ 25 ಕ್ಷೇತ್ರಗಳಿಗೆ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯದ ಸ್ಕ್ರೀನಿಂಗ್ ಕಮಿಟಿ ಈಗಾಗಲೇ ಕೇಂದ್ರ ಮುಖಂಡರಿಗೆ ಕಳುಹಿಸಿಕೊಟ್ಟಿದೆ. "ಉತ್ತಮ ಚರ್ಚೆ ನಡೆದಿದ್ದು, ಹಲವು ರಾಜ್ಯಗಳಿಗೆ ನಾವು ಅಭ್ಯರ್ಥಿಗಳ ಹೆಸರನ್ನು ಅಂತಿಮಪಡಿಸುತ್ತಿದ್ದೇವೆ. ಸಿಇಸಿ ಸಭೆ ಮಾರ್ಚ್ 7ರಂದು ನಡೆಯಲಿದ್ದು, ಆ ಸಭೆಯ ಬಳಿಕ ಬಹಳಷ್ಟು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸುವ ನಿರೀಕ್ಷೆ ಇದೆ" ಎಂದು ಸಚಿನ್ ಪೈಲಟ್ ರಾಜಸ್ಥಾನದ ಸ್ಕ್ರೀನಿಂಗ್ ಸಮಿತಿ ಸಭೆ ಬಳಿಕ ಪ್ರತಿಕ್ರಿಯಿಸಿದ್ದಾರೆ.