ಲೋಕಸಭಾ ಚುನಾವಣೆ: ಮತ ಚಲಾಯಿಸಲು ಬಾಡಿಗೆ ವಿಮಾನದಲ್ಲಿ ಬಂದ ಅನಿವಾಸಿ ಭಾರತೀಯರು!

Update: 2024-04-27 03:11 GMT

Photo: PTI

ಕೋಝಿಕ್ಕೋಡ್: ದೇಶದ ವಿವಿಧೆಡೆ ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ವಿದೇಶಗಳಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಅನಿವಾಸಿ ಭಾರತೀಯರು ವಿಮಾನದಲ್ಲಿ, ವಿಶೇಷ ಬಾಡಿಗೆ ವಿಮಾನದಲ್ಲಿ ಆಗಮಿಸಿದ ಘಟನೆಗಳು ವರದಿಯಾಗಿವೆ.

ಯುಎಇಯಲ್ಲಿ ಉದ್ಯೋಗದಲ್ಲಿರುವ ಅನ್ವರ್ ನಹಾ (53) ಕೇರಳದ ಮಲಪ್ಪುರಂ ಜಿಲ್ಲೆಯ ಪೊನ್ನಾನಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಹಕ್ಕು ಚಲಾಯಿಸಿದರು. ವಿಶೇಷ ಬಾಡಿಗೆ ವಿಮಾನ "ವೋಟ್ ಫ್ಲೈಟ್"ನಲ್ಲಿ ಬುಧವಾರ ದುಬೈನಿಂದ ತಮ್ಮ ಮತ ಚಲಾಯಿಸುವ ಸಲುವಾಗಿಯೇ ಆಗಮಿಸಿದ್ದರು. ಈ ಚುನಾವಣೆಗಾಗಿ ಯುಎಇನಿಂದ ಐದು ವಿಶೇಷ ಬಾಡಿಗೆ ವಿಮಾನಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಐಯುಎಂಎಲ್ ಸಹ ಸಂಘಟನೆ ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್ (ಕೆಎಂಸಿಸಿ) ಇದನ್ನು ವ್ಯವಸ್ಥೆ ಮಾಡಿತ್ತು.

ಇದರ ಹೊರತಾಗಿ ಹಲವು ಮಂದಿ ಪ್ರಯಾಣಿಕ ವಿಮಾನದಲ್ಲಿ ಸಾಮೂಹಿಕವಾಗಿ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡು ಮತದಾನಕ್ಕೆ ಆಗಮಿಸಿದ್ದಾರೆ. ಶುಕ್ರವಾರ ನಡೆದ ಎರಡನೇ ಹಂತದ ಮತದಾನದಲ್ಲಿ ಮತ ಚಲಾಯಿಸುವ ಸಲುವಾಗಿ ಹಲವು ಮಂದಿ ಅನಿವಾಸಿ ಭಾರತೀಯರು ವಿಮಾನಗಳಲ್ಲಿ ಆಗಮಿಸಿದ್ದಾರೆ.

ಕೇರಳ ಹಾಗೂ ಕರ್ನಾಟಕದ ಕರಾವಳಿಯಿಂದ, ಉತ್ತರದ ಮೀರಠ್ ನಿಂದ ಉದ್ಯೋಗಕ್ಕಾಗಿ ವಿದೇಶಗಳಿಗೆ ತೆರಳಿದವರು ಆಗಮಿಸಿದ್ದಾರೆ. ಮಾನವ್ ತ್ಯಾಗಿ (35) ನ್ಯೂಜಿಲೆಂಡ್ ನಿಂದ ಮತದಾನಕ್ಕಾಗಿ ಬಂದಿದ್ದರೆ, ಗೌರವ್ ಅಗರ್ವಾಲ್ ಗುಲಾಟಿ (37) ಎಂಬ ಟೆಕ್ಕಿ ಜರ್ಮನಿಯಿಂದ ಹರ್ಷವರ್ಧನ್ ಅಗರ್ವಾಲ್ (31) ಅಮೆರಿಕದಿಂದ ಆಗಮಿಸಿದ್ದರು.

ಕೇರಳ ಮೂಲದವರು ಬಾಡಿಗೆ ವಿಮಾನಗಳಲ್ಲಿ ಮತ ಚಲಾಯಿಸಲು ಆಗಮಿಸಿರುವುದು ದೊಡ್ಡ ಸುದ್ದಿಯಾಗಿದೆ. ವಡಗರ ಕ್ಷೇತ್ರಕ್ಕೆ ಎರಡು ವೋಟ್ ಫ್ಲೈಟ್ ಗಳಲ್ಲಿ ಎನ್ಆರ್ಐಗಳು ಆಗಮಿಸಿದ್ದಾರೆ ಎಂದು ದುಬೈ ಕೆಎಂಸಿಸಿ ರಾಜ್ಯ ಘಟಕದ ಅಧ್ಯಕ್ಷ ಹಸನ್ ಹೇಳಿದ್ದಾರೆ. ಒಟ್ಟು 12 ವಿಶೇಷ ಬಾಡಿಗೆ ವಿಮಾನಗಳಲ್ಲಿ ಮತದಾನಕ್ಕಾಗಿ ದುಬೈ, ಸೌದಿ ಅರೇಬಿಯಾ, ಬಹರೈನ್ ಮತ್ತು ಇತರ ಕೊಲ್ಲಿ ರಾಷ್ಟ್ರಗಳಿಂದ ಆಗಮಿಸಿದ್ದಾರೆ ಎಂದು ಅವರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News