ಸಂಸತ್ತಿನಲ್ಲಿ ನಿಮ್ಮ ಧ್ವನಿಯಾಗಲು ಎದುರು ನೋಡುತ್ತಿದ್ದೇನೆ : ಪ್ರಿಯಾಂಕಾ ಗಾಂಧಿ
ಹೊಸದಿಲ್ಲಿ: ಸಂಸತ್ತಿನಲ್ಲಿ ವಯನಾಡ್ ಜನತೆಯ ಧ್ವನಿಯಾಗಲು ಎದುರು ನೋಡುತ್ತಿದ್ದೇನೆ ಎಂದು ಶನಿವಾರ ಹೇಳಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ತಮಗೆ ದಾರಿ ತೋರಿಸಿದ ಹಾಗೂ ತಮ್ಮ ಬೆಂಬಲಕ್ಕೆ ಯಾವಾಗಲೂ ನಿಂತ ತಮ್ಮ ಸಹೋದರ ರಾಹುಲ್ ಗಾಂಧಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 4 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಅಮೋಘ ಜಯ ಗಳಿಸಿದ ನಂತರ, ಅವರಿಂದ ಈ ಹೇಳಿಕೆ ಹೊರ ಬಿದ್ದಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕಾ ಗಾಂಧಿ, “ನನ್ನ ಆತ್ಮೀಯ ವಯನಾಡ್ ಸಹೋದರ ಮತ್ತು ಸಹೋದರಿಯರೆ, ನೀವು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಕೃತಜ್ಞತೆಯಿಂದ ಭಾವುಕಳಾಗಿದ್ದೇನೆ. ಮುಂದಿನ ದಿನಗಳಲ್ಲಿ ಈ ವಿಜಯವು ನಿಮ್ಮದೇ ವಿಜಯ ಎಂದು ನಿಮಗನ್ನಿಸುವಂತೆ ಖಾತರಿ ಪಡಿಸುತ್ತೇನೆ. ನಿಮ್ಮ ಪ್ರತಿನಿಧಿಯಾಗಿ ಆಯ್ಕೆಯಾಗಿರುವವರು ನಿಮ್ಮ ಬಯಕೆ ಹಾಗೂ ಕನಸುಗಳನ್ನು ಅರ್ಥ ಮಾಡಿಕೊಂಡಿದ್ದಾರೆ ಹಾಗೂ ನಿಮ್ಮವರೇ ಆಗಿ ನಿಮಗಾಗಿ ಹೋರಾಟ ಮಾಡುತ್ತಾರೆ ಎಂದನ್ನಿಸುವಂತೆ ಮಾಡುತ್ತೇನೆ” ಎಂದು ಭರವಸೆ ನೀಡಿದ್ದಾರೆ.
“ಸಂಸತ್ತಿನಲ್ಲಿ ನಿಮ್ಮ ಧ್ವನಿಯಾಗಲು ಎದುರು ನೋಡುತ್ತಿದ್ದೇನೆ” ಎಂದೂ ಹೇಳಿರುವ ಅವರು, ತಮ್ಮೆಡೆಗೆ ವಯನಾಡ್ ಜನತೆ ತೋರಿರುವ ಗೌರವ ಮತ್ತು ಅಪಾರ ಪ್ರೀತಿಗೆ ಧನ್ಯವಾದ ಸಲ್ಲಿಸಿದ್ದಾರೆ.
“ಚುನಾವಣಾ ಪ್ರಚಾರದಲ್ಲಿ ಕಠಿಣ ಪರಿಶ್ರಮದಿಂದ ದುಡಿದ ಯುಡಿಎಫ್ ನಲ್ಲಿನ ನನ್ನ ಸಹೋದ್ಯೋಗಿಗಳು, ಕೇರಳದಾದ್ಯಂತದ ನಾಯಕರು, ಕಾರ್ಯಕರ್ತರು, ಸ್ವಯಂಸೇವಕರು ಹಾಗೂ ನನ್ನ ಕಚೇರಿಯ ಸಹೋದ್ಯೋಗಿಗಳ ನೆರವಿಗೆ ಧನ್ಯವಾದ ಸಲ್ಲಿಸುತ್ತೇನೆ. ಹಾಗೆಯೇ, ನನ್ನ ಪ್ರತಿ ದಿನ 12 ಗಂಟೆಗಳ ಊಟ, ವಿರಾಮವಿಲ್ಲದ ಕಾರು ಪ್ರಯಾಣಗಳನ್ನು ನಾವು ನಂಬಿರುವ ಸಿದ್ಧಾಂತಗಳಿಗಾಗಿ ಹೋರಾಡುವ ಯೋಧರಂತೆ ಸಹಿಸಿಕೊಂಡಿದ್ದಕ್ಕೂ ಧನ್ಯವಾದ ಸಲ್ಲಿಸುತ್ತೇನೆ” ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
“ನನಗೆ ಪ್ರೀತಿ ಮತ್ತು ಸ್ಥೈರ್ಯ ತುಂಬಿದ ನನ್ನ ತಾಯಿ, ರಾಬರ್ಟ್ ಹಾಗೂ ನನ್ನ ಇಬ್ಬರು ಮಕ್ಕಳಾದ ರೈಹಾನ್ ಮತ್ತು ಮಿರಾಯಾಗೆ ಯಾವುದೇ ಕೃತಜ್ಞತೆಯೂ ಸಾಲುವುದಿಲ್ಲ. ರಾಹುಲ್ ನೀವು ಅವರೆಲ್ಲರಿಗಿಂತ ಶೂರರಾಗಿದ್ದು, ನನಗೆ ದಾರಿ ತೋರಿದ್ದಕ್ಕೆ ಹಾಗೂ ನನ್ನ ಬೆಂಬಲಕ್ಕೆ ನಿಂತಿದ್ದಕ್ಕೆ ನಿಮಗೆ ಧನ್ಯವಾದಗಳು, ಎಂದಿಗೂ” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
ಇದಕ್ಕೂ ಮುನ್ನ, ಸಂಸತ್ತಿನಲ್ಲಿ ತಮ್ಮ ಧ್ವನಿಯಾಗಲು ಶಕ್ತಿಶಾಲಿ ಹಾಗೂ ಬದ್ಧತೆಯುಳ್ಳ ನಾಯಕಿಯನ್ನು ಚುನಾಯಿಸಿದ್ದಕ್ಕೆ ವಯನಾಡ್ ಜನತೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಕೂಡಾ ಅಭಿನಂದನೆ ಸಲ್ಲಿಸಿದರು.
“ವಯನಾಡ್ ನ ಎಲ್ಲ ವರ್ಗದ ಜನರು ತೋರಿರುವ ಸ್ಪಂದನೆಯು ಕಾಂಗ್ರೆಸ್ ಧ್ವಜ ಎಂದಿಗೂ ಎತ್ತರದಲ್ಲೇ ಹಾರಾಡಲಿದೆ ಎಂಬುದನ್ನು ತೋರಿಸಿದೆ. ರಾಹುಲ್ ಗಾಂಧಿ ವಯನಾಡ್ ಜನತೆಯ ಹಿತಾಸಕ್ತಿಯನ್ನು ತಮ್ಮ ಆದ್ಯತೆಯಾಗಿಸಿಕೊಂಡಿದ್ದಂತೆಯೆ, ಸಮಾಜದ ಪ್ರತಿ ವರ್ಗದ ಕಲ್ಯಾಣವನ್ನು ಪ್ರಿಯಾಂಕಾ ಗಾಂಧಿ ಖಾತರಿ ಪಡಿಸಲಿದ್ದಾರೆ ಹಾಗೂ ಅವರ ಸಮಸ್ಯೆಗಳು ದಿಲ್ಲಿಯಲ್ಲಿ ಕೇಳುವಂತೆ ಮಾಡಲಿದ್ದಾರೆ” ಎಂದು ಅವರು ಭರವಸೆ ನೀಡಿದ್ದಾರೆ.
“ವಯನಾಡ್ ಜನತೆಯ ಮುಂದುವರಿದ ಬೆಂಬಲಕ್ಕೆ ಇಡೀ ಕಾಂಗ್ರೆಸ್ ಪಕ್ಷದ ಪರವಾಗಿ ತುಂಬು ಹೃದಯದ ಕೃತಜ್ಞತೆ ಸಲ್ಲಿಸುತ್ತೇನೆ ಹಾಗೂ ನಿಮ್ಮ ಕಲ್ಯಾಣಕ್ಕೆ ಯಾವಾಗಲೂ ಬದ್ಧವಾಗಿ ಉಳಿಯಲಿದ್ದೇವೆ” ಎಂದೂ ಆಶ್ವಾಸನೆ ನೀಡಿದ್ದಾರೆ.
ಈ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ರಾಯ್ ಬರೇಲಿ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ ನಂತರ, ವಯನಾಡ್ ಲೋಕಸಭಾ ಕ್ಷೇತ್ರವನ್ನು ತೆರವುಗೊಳಿಸಿದ್ದ ರಾಹುಲ್ ಗಾಂಧಿ, ಆ ಕ್ಷೇತ್ರಕ್ಕೆ ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿಯನ್ನು ಹೆಸರಿಸಿದ್ದರು. ಆ ಮೂಲಕ ಅವರ ಚೊಚ್ಚಲ ಚುನಾವಣಾ ರಾಜಕಾರಣಕ್ಕೆ ದಾರಿ ಮಾಡಿಕೊಟ್ಟಿದ್ದರು.