ಮಧ್ಯಪ್ರದೇಶದ ಉದ್ಯಮಿ-ಪತ್ನಿ ಸಾವು | ಆತ್ಮಹತ್ಯೆ ಪತ್ರದಲ್ಲಿ ಈಡಿ, ಬಿಜೆಪಿ ನಾಯಕರಿಂದ ಕಿರುಕುಳ ಉಲ್ಲೇಖ
ಭೋಪಾಲ : ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ ಉದ್ಯಮಿ ಮತ್ತು ಅವರ ಪತ್ನಿಯ ನಿವಾಸದಲ್ಲಿ ಪತ್ತೆಯಾಗಿರುವ ಆತ್ಮಹತ್ಯೆ ಪತ್ರವು ಕಾಂಗ್ರೆಸ್ ಮತ್ತು ಆಡಳಿತ ಬಿಜೆಪಿ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆತ್ಮಹತ್ಯೆ ಪತ್ರದಲ್ಲಿ ತನ್ನ ಮಕ್ಕಳನ್ನು ಒಂಟಿಯಾಗಿ ಬಿಡದಂತೆ ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರನ್ನು ಆಗ್ರಹಿಸಿರುವ ಮೃತ ಉದ್ಯಮಿ ಮನೋಜ ಪರಮಾರ್ ಅವರು, ಜಾರಿ ನಿರ್ದೇಶನಾಲಯ(ಈಡಿ) ಮತ್ತು ಬಿಜೆಪಿ ನಾಯಕರಿಂದ ಕಿರುಕುಳವನ್ನು ಆರೋಪಿಸಿದ್ದಾರೆ.
ಪರಮಾರ್ ಮತ್ತು ಅವರ ಪತ್ನಿ ಪಕ್ಷದ ಬೆಂಬಲಿಗರಾಗಿದ್ದರು ಮತ್ತು ಇದೇ ಕಾರಣದಿಂದ ಈಡಿ ಅವರಿಗೆ ಕಿರುಕುಳ ನೀಡಿತ್ತು ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ.
ರಾಹುಲ್ ಗಾಂಧಿಯವರ ಭಾರತ ಜೋಡೊ(ನ್ಯಾಯ) ಯಾತ್ರೆಯ ಸಂದರ್ಭದಲ್ಲಿ ಪರಮಾರ್ ದಂಪತಿಯ ಮಕ್ಕಳು ಅವರಿಗೆ ಪಿಗ್ಗಿಬ್ಯಾಂಕ್ ಉಡುಗೊರೆಯನ್ನು ನೀಡಿದ್ದರು.
ಆತ್ಮಹತ್ಯೆ ಪತ್ರವು ಅರ್ಜಿಯ ರೂಪದಲ್ಲಿದೆ. ತನಿಖೆಯು ಪ್ರಗತಿಯಲ್ಲಿರುವುದರಿಂದ ಆ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಉಪ ವಿಭಾಗೀಯ ಪೋಲಿಸ್ ಅಧಿಕಾರಿ ಆಕಾಶ ಅಮಲ್ಕರ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಆತ್ಮಹತ್ಯೆ ಪತ್ರವನ್ನು ಭಾರತದ ರಾಷ್ಟ್ರಪತಿ,ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿಯವರನ್ನು ಉದ್ದೇಶಿಸಿ ಬರೆಯಲಾಗಿದೆ.
ಪರಮಾರ್ ಮತ್ತು ಅವರ ಪತ್ನಿ ನೇಹಾ ಮೃತದೇಹ ಶುಕ್ರವಾರ ಬೆಳಿಗ್ಗೆ ಸೆಹೋರ್ ಜಿಲ್ಲೆಯ ಅಷ್ಟಾ ಪಟ್ಟಣದಲ್ಲಿಯ ನಿವಾಸದಲ್ಲಿ ಸೀಲಿಂಗ್ ಫ್ಯಾನ್ಗಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.
ಪರಮಾರ್ ಪತ್ರದಲ್ಲಿ ತನ್ನ ಕುಟುಂಬದ ಕಾಳಜಿ ವಹಿಸುವಂತೆ ರಾಹುಲ್ಗೆ ಆಗ್ರಹಿಸಿದ್ದಾರೆ.
ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಅವರು,‘ಕಾಂಗ್ರೆಸ್ ಜನತೆಯ ಪಕ್ಷವಾಗಿದೆ, ನಾವು ಪರಮಾರ್ ಕುಟುಂಬದ ಬಗ್ಗೆ ಕಾಳಜಿ ವಹಿಸುತ್ತೇವೆ’ ಎಂದು ಸುದ್ದಿಸಂಸ್ಥೆಗೆ ತಿಳಿಸಿದರು. ಈಡಿ ಮತ್ತು ಇತರ ತನಿಖಾ ಸಂಸ್ಥೆಗಳಿಂದ ಕಿರುಕುಳದ ಬಳಿಕ ಹಲವಾರು ನಾಯಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಎಂದೂ ಅವರು ಹೇಳಿದರು.
ಬಿಜೆಪಿ ಸರಕಾರ ಮತ್ತು ಈಡಿ.ಅಧಿಕಾರಿಗಳ ಕಿರುಕುಳದಿಂದಾಗಿ ಪರಮಾರ್ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ ಶನಿವಾರ ಎಕ್ಸ್ ಪೋಸ್ಟ್ನಲ್ಲಿ ಪ್ರತಿಪಾದಿಸಿದ್ದಾರೆ.
ಪರಮಾರ್ ದಂಪತಿ ಕುರಿತು ಕಾಂಗ್ರೆಸ್ ಆರೋಪಗಳನ್ನು ರಾಜ್ಯ ಬಿಜೆಪಿಯ ಮಾಧ್ಯಮ ಉದ್ತುವಾರಿ ಆಶಿಷ್ ಅಗರವಾಲ್ ಖಂಡಿಸಿದ್ದಾರೆ.
ಡಿ.5ರಂದು ಈಡಿ ಅಧಿಕಾರಿಗಳು ಬ್ಯಾಂಕ್ ವಂಚನೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪರಮಾರ್ಗೆ ಸೇರಿದ ನಾಲ್ಕು ಆವರಣಗಳು ಒಳಗೊಂಡಂತೆ ಹಲವಾರು ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿದ್ದರು. ಕೆಲವು ಪ್ರಮುಖ ಚಿನ್ನಾಭರಣ ವ್ಯಾಪಾರಿಗಳು ಮತ್ತು ಓರ್ವ ಲೆಕ್ಕ ಪರಿಶೋಧಕರೂ ಈಡಿ ದಾಳಿಗೆ ಗುರಿಯಾಗಿದ್ದರು.