ಮಧ್ಯಪ್ರದೇಶ | ಮದುವೆ ಮೆರವಣಿಗೆಯಲ್ಲಿ ದಲಿತ ವರನಿಗೆ ಹಲ್ಲೆ ; ಮೂವರ ವಿರುದ್ಧ ಪ್ರಕರಣ

ಸಾಂದರ್ಭಿಕ ಚಿತ್ರ | PC : freepik.com
ಭೋಪಾಲ: ತನ್ನ ಮದುವೆ ಮೆರವಣಿಗೆಯಲ್ಲಿ ಕುದುರೆಯ ಮೇಲೆ ಸಾಗುತ್ತಿದ್ದ ದಲಿತ ವರನಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಮಧ್ಯಪ್ರದೇಶದ ಟಿಕಮ್ ಗಡ ಜಿಲ್ಲೆಯ ಮೋಖ್ರಾ ಗ್ರಾಮದ ಮೂವರ ವಿರುದ್ಧ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶುಕ್ರವಾರ ಈ ಘಟನೆ ನಡೆದಿದ್ದು, ಭಾನ್ ಕುಂವರ್ ರಾಜಾ ಪರಮಾರ್ ಎಂಬ ಮಹಿಳೆ ಹಾಗೂ ಸೂರ್ಯಪಾಲ್ ಮತ್ತು ದೃಗ್ಪಾಲ್ ಎನ್ನುವವರು ವರ ಜಿತೇಂದ್ರ ಅಹಿರ್ವಾರ್ ಮೇಲೆ ಕಲ್ಲುಗಳಿಂದ ದಾಳಿ ನಡೆಸಿದ್ದರು. ಅಹಿರ್ವಾರ್ ರ ಜಾತಿ ನಿಂದನೆಯನ್ನು ಮಾಡಿದ್ದ ಪರಮಾರ್ ಕೆಳಜಾತಿಯ ವ್ಯಕ್ತಿ ಕುದುರೆ ಸವಾರಿ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಳು ಎಂದು ಆರೋಪಿಸಲಾಗಿದೆ.
‘ನಾವು ಗ್ರಾಮದಲ್ಲಿ ಮೆರವಣಿಗೆಯಲ್ಲಿ ಸಾಗುತ್ತಿದ್ದಾಗ ಅವರು ನಮ್ಮನ್ನು ತಡೆದಿದ್ದರು, ನಮ್ಮ ಮೇಲೆ ಕಲ್ಲುತೂರಾಟ ನಡೆಸಿದ್ದರು. ಕುದುರೆಯಿಂದ ಇಳಿದು ಬರಿಗಾಲಲ್ಲಿ ನಡೆದುಕೊಂಡು ಹೋಗುವಂತೆ ನನಗೆ ಸೂಚಿಸಿದ್ದರು. ನಮ್ಮನ್ನು ಅವಮಾನಿಸಿದ್ದ ಅವರು ನಾವು ಅವರ ಮನೆಗಳ ಸಮೀಪ ಚಪ್ಪಲಿಗಳನ್ನೂ ಧರಿಸಬಾರದು ಎಂದು ತಾಕೀತು ಮಾಡಿದ್ದರು’ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅಹಿರ್ವಾರ್ ತಿಳಿಸಿದರು.
ಹಲ್ಲೆಯಲ್ಲಿ ನಾಲ್ವರು ವ್ಯಕ್ತಿಗಳು ಗಾಯಗೊಂಡಿದ್ದಾರೆ.
ಮೂವರು ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು ಪರಮಾರ್‌ಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ತಲೆ ಮರೆಸಿಕೊಂಡಿರುವ ಇತರ ಇಬ್ಬರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೋಲಿಸರು ತಿಳಿಸಿದರು.