ಇಶಾ ಫೌಂಡೇಶನ್ ವಿರುದ್ಧ ಇರುವ ಕ್ರಿಮಿನಲ್ ಪ್ರಕರಣಗಳ ವಿವರ ಕೋರಿದ ಮದ್ರಾಸ್ ಹೈಕೋರ್ಟ್

Update: 2024-10-01 09:08 GMT

Photo : barandbench.com

ಚೆನ್ನೈ: ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ವಿವರವನ್ನು ಸಲ್ಲಿಸುವಂತೆ ಸೋಮವಾರ ತಮಿಳುನಾಡು ಸರಕಾರಕ್ಕೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದೆ ಎಂದು barandbench.com ವರದಿ ಮಾಡಿದೆ.

ಇಶಾ ಫೌಂಡೇಶನ್ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳಿರುವುದರಿಂದ, ಈ ವಿಷಯದ ಕುರಿತು ಮತ್ತಷ್ಟು ಗಮನ ಹರಿಸುವುದು ಅಗತ್ಯವಾಗಿದೆ ಎಂದು ನ್ಯಾ. ಎಸ್.ಎಂ.ಸುಬ್ರಮಣಿಯಮ್ ಹಾಗೂ ವಿ.ಸಿವಗ್ನಾನಂ ಅವರನ್ನೊಳಗೊಂಡ ನ್ಯಾಯಪೀಠವು ಅಭಿಪ್ರಾಯ ಪಟ್ಟಿದೆ.

ವಾಸುದೇವ್ ಯಾಕೆ ತಮ್ಮ ಪುತ್ರಿಗೆ ವಿವಾಹ ನೆರವೇರಿಸಿ, ಆಕೆ ತನ್ನ ಜೀವನದಲ್ಲಿ ಚೆನ್ನಾಗಿ ನೆಲೆಯೂರುವಂತೆ ಪ್ರೋತ್ಸಾಹಿಸಿದ್ದರೂ, ಇತರ ಮಹಿಳೆಯರಿಗೇಕೆ ಲೌಕಿಕ ಜೀವನವನ್ನು ತೊರೆಯುವಂತೆ ಉತ್ತೇಜಿಸುತ್ತಿದ್ದಾರೆ ಎಂಬ ಕುರಿತು ಹೈಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿತು.

ಕೊಯಂಬತ್ತೂರಿನ ನಿವೃತ್ತ ಪ್ರಾಧ್ಯಾಪಕರಾದ ಎಸ್.ಕಾಮರಾಜ್ ಎಂಬುವವರು ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.

ತಮ್ಮ 42 ಮತ್ತು 39 ವರ್ಷದ ಸುಶಿಕ್ಷಿತ ಪುತ್ರಿಯರ ಮನಸ್ಸನ್ನು ತಿರುಚಿ, ಅವರು ಕೊಯಂಬತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ನೆಲೆಯೂರುವಂತೆ ಮಾಡಲಾಗಿದೆ ಎಂದು ಆರೋಪಿಸಿ ಕಾಮರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು. ತಮ್ಮ ಪುತ್ರಿಯರಿಗೆ ತಮ್ಮ ಕುಟುಂಬದೊಂದಿಗೆ ಯಾವುದೇ ಸಂಪರ್ಕ ಇಟ್ಟುಕೊಳ್ಳಲು ಇಶಾ ಫೌಂಡೇಶನ್ ಆಡಳಿತ ಮಂಡಳಿಯು ಅವಕಾಶ ನೀಡುತ್ತಿಲ್ಲ ಎಂದೂ ಅವರು ನ್ಯಾಯಾಲಯದೆದುರು ಅಳಲು ತೋಡಿಕೊಂಡಿದ್ದರು.

ಇಶಾ ಫೌಂಡೇಶನ್ ವಿರುದ್ಧ ಹಲವಾರು ಲೈಂಗಿಕ ಕಿರುಕುಳ ಹಾಗೂ ದುರ್ನಡತೆಯ ಕ್ರಿಮಿನಲ್ ಪ್ರಕರಣಗಳು ಹಾಗೂ ಆರೋಪಗಳು ಇನ್ನೂ ಬಾಕಿ ಎಂದೂ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು.

ಈ ಹಿಂದಿನ ಆದೇಶದನ್ವಯ, ಇಬ್ಬರೂ ಮಹಿಳೆಯರು ನ್ಯಾಯಾಲಯದಲ್ಲಿ ಹಾಜರಿದ್ದರು. ನಾವು ನಮ್ಮ ಸ್ವ ಇಚ್ಛೆಯಿಂದ ಇಶಾ ಫೌಂಡೇಶನ್ ನೊಂದಿಗೆ ಇದ್ದೇವೆ ಹಾಗೂ ಅಲ್ಲಿರಲು ಯಾರೂ ನಮ್ಮನ್ನು ಬಲವಂತಪಡಿಸಿಲ್ಲ ಎಂದು ಆ ಮಹಿಳೆಯರು ನ್ಯಾಯಾಲಯಕ್ಕೆ ತಿಳಿಸಿದರು. ಆಗ ನ್ಯಾಯಾಧೀಶರು ಆ ಮಹಿಳೆಯರೊಂದಿಗೆ ತಮ್ಮ ಕೊಠಡಿಯಲ್ಲಿ ಚರ್ಚಿಸಲು ತೀರ್ಮಾನಿಸಿದರು.

ಇದಾದ ನಂತರ, ಇಶಾ ಫೌಂಡೇಶನ್ ಕುರಿತು ಮತ್ತಷ್ಟು ಅನುಮಾನ ವ್ಯಕ್ತಪಡಿಸಿದ ನ್ಯಾಯಾಲಯವು, “ಜಗ್ಗಿ ವಾಸುದೇವ್ ತಮ್ಮ ಪುತ್ರಿಗೆ ವಿವಾಹ ನೆರವೇರಿಸಿ, ಆಕೆ ಜೀವನದಲ್ಲಿ ಉತ್ತಮವಾಗಿ ನೆಲೆಯೂರಲು ಪ್ರೋತ್ಸಾಹ ನೀಡಿರುವಾಗ, ಇತರ ಮಹಿಳೆಯರಿಗೇಕೆ ಅವರು ಲೌಕಿಕ ಜೀವನವನ್ನು ತೊರೆಯುವಂತೆ ಉತ್ತೇಜಿಸುತ್ತಿದ್ದಾರೆ” ಎಂದು ಇಶಾ ಫೌಂಡೇಶನ್ ಪರವಾಗಿ ನ್ಯಾಯಾಲಯದಲ್ಲಿ ಹಾಜರಿದ್ದ ವಕೀಲರನ್ನು ಪ್ರಶ್ನಿಸಿತು.

ಈ ಕುರಿತು ಮುಂದಿನ ವಿಚಾರಣೆ ಅಕ್ಟೋಬರ್ 4ರಂದು ನಡೆಯಲಿದೆ.

ಅರ್ಜಿದಾರ ಕಾಮರಾಜ್ ಪರವಾಗಿ ವಕೀಲ ಎಂ.ಪುರುಷೋತ್ತಮನ್ ಹಾಗೂ ಎಂ.ಪ್ರಬಾಹರನ್ ನ್ಯಾಯಾಲಯದಲ್ಲಿ ಹಾಜರಿದ್ದರೆ, ತಮಿಳುನಾಡು ಸರಕಾರದ ಪರವಾಗಿ ಹೆಚ್ಚುವರಿ ಸಾರ್ವಜನಿಕ ಅಭಿಯೋಜಕ ಇ.ರಾಜ್ ತಿಲಕ್ ಹಾಜರಿದ್ದರು.

ಇಶಾ ಫೌಂಡೇಶನ್ ಪರವಾಗಿ ವಕೀಲರಾದ ಎಂ.ಸುರೇಶ್ ಮತ್ತು ಎಸ್.ರಾಜೇಂದ್ರ ಕುಮಾರ್ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News