ಮಹಾಕುಂಭ ಮೇಳದಲ್ಲಿ ಕಾಲ್ತುಳಿತ: ಕೇಂದ್ರ, ಉತ್ತರಪ್ರದೇಶ ಸರ್ಕಾರಕ್ಕೆ ಕಾಂಗ್ರೆಸ್ ತರಾಟೆ

Update: 2025-01-29 06:08 GMT
ಮಹಾಕುಂಭ ಮೇಳದಲ್ಲಿ ಕಾಲ್ತುಳಿತ: ಕೇಂದ್ರ, ಉತ್ತರಪ್ರದೇಶ ಸರ್ಕಾರಕ್ಕೆ ಕಾಂಗ್ರೆಸ್ ತರಾಟೆ

Photo credit: PTI

  • whatsapp icon

ಹೊಸದಿಲ್ಲಿ : ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ಉತ್ತರಪ್ರದೇಶ ಸರ್ಕಾರವನ್ನು ಕಾಂಗ್ರೆಸ್ ಬುಧವಾರ ತರಾಟೆಗೆ ತೆಗೆದುಕೊಂಡಿದೆ. ಮಹಾಕುಂಭ ಮೇಳದ ನಿರ್ವಹಣೆಯನ್ನು ಆದಿತ್ಯನಾಥ್ ಗಿಂತ ಉತ್ತಮ ಆಡಳಿತಗಾರರಿಗೆ ವಹಿಸಬೇಕು. ವಿವಿಐಪಿಗಳ ಸಂಸ್ಕೃತಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದೆ.

ಮಹಾಕುಂಭ ಮೇಳದ ಮೌನಿ ಅಮಾವಾಸ್ಯೆ ಸಂದರ್ಭದಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಯ ಸಂಗಮಕ್ಷೇತ್ರದಲ್ಲಿ ಪವಿತ್ರ ಸ್ನಾನಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಮಂಗಳವಾರ ಮಧ್ಯರಾತ್ರಿಯ ಬಳಿಕ ಬುಧವಾರ ನಸುಕಿನ 1 ಗಂಟೆಯ ಸುಮಾರಿಗೆ ಜನದಟ್ಟಣೆ, ನೂಕು ನುಗ್ಗಲಿನಿಂದ ಕಾಲ್ತುಳಿತ ಸಂಭವಿಸಿದ್ದು, ಹಲವಾರು ಸಾವುನೋವುಗಳು ಸಂಭವಿಸಿರುವ ಸಾಧ್ಯತೆ ಇದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಮಹಾಕುಂಭದ ವೇಳೆ ತೀರ್ಥರಾಜ್ ಸಂಗಮದ ದಡದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಅನೇಕ ಭಕ್ತರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂಬ ಸುದ್ದಿ ಅತ್ಯಂತ ದುಃಖಕರವಾಗಿದೆ. ಭಕ್ತರ ಕುಟುಂಬಗಳಿಗೆ ನಮ್ಮ ಆಳವಾದ ಸಂತಾಪಗಳು ಮತ್ತು ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇವೆ. ಅರೆಬರೆ ವ್ಯವಸ್ಥೆ, ವಿಐಪಿ ಸಂಸ್ಕೃತಿ, ನಿರ್ವಹಣೆಗಿಂತ ಸ್ವಯಂ ಪ್ರಚಾರದತ್ತ ಗಮನ ಹರಿಸಿರುವುದು ಮತ್ತು ದುರಾಡಳಿತವೇ ಇದಕ್ಕೆ ಕಾರಣ. ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಈ ರೀತಿ ವ್ಯವಸ್ಥೆ ಮಾಡಿರುವುದು ಖಂಡನೀಯ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಚ್ಚೆತ್ತುಕೊಂಡು, ಮುಂದೆ ಇಂತಹ ಅಹಿತಕರ ಘಟನೆಗಳು ನಡೆಯದಂತೆ ವ್ಯವಸ್ಥೆ ಮಾಡಬೇಕು. ಭಕ್ತಾದಿಗಳ ವಸತಿ, ಆಹಾರ, ಪ್ರಥಮ ಚಿಕಿತ್ಸೆ ಮತ್ತು ಸಂಚಾರ ಇತ್ಯಾದಿ ವ್ಯವಸ್ಥೆಗಳನ್ನು ಸುಧಾರಿಸಬೇಕು, ವಿಐಪಿ ಸಂಚಾರಕ್ಕೆ ಕಡಿವಾಣ ಹಾಕಬೇಕು. ನಮ್ಮ ಸಂತರು ಮತ್ತು ಋಷಿಮುನಿಗಳೂ ಇದನ್ನೇ ಬಯಸುತ್ತಾರೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡುವಂತೆ ಕಾಂಗ್ರೆಸ್ ಕಾರ್ಯಕರ್ತರನ್ನು ಕೇಳಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಪ್ರಯಾಗರಾಜ್ ನಲ್ಲಿ ಕುಂಭಸ್ನಾನದ ಸಮಯದಲ್ಲಿ ಕಾಲ್ತುಳಿತದಲ್ಲಿ ಅನೇಕ ಭಕ್ತರು ಮೃತಪಟ್ಟಿರುವುದು ತುಂಬಾ ದುಃಖಕರವಾಗಿದೆ. ಅಲ್ಲಿದ್ದ ಜನಸಂದಣಿ ಮತ್ತು ಅರೆಬರೆ ವ್ಯವಸ್ಥೆಗಳಿಂದಾಗಿ ಇಂತಹ ಅವಘಡ ಸಂಭವಿಸುವ ಭೀತಿ ನಮ್ಮಲ್ಲಿತ್ತು. ಇನ್ನೂ ಅನೇಕ 'ಮಹಾ ಸ್ನಾನ'ಗಳು ಬಾಕಿ ಉಳಿದಿವೆ, ಆದ್ದರಿಂದ ಹೆಚ್ಚುವರಿ ಭದ್ರತಾ ಪಡೆಗಳನ್ನು ಅಲ್ಲಿಗೆ ಕಳುಹಿಸಬೇಕು, ನಿರ್ವಹಣೆಯ ಜವಾಬ್ದಾರಿಯನ್ನು ಯೋಗಿ ಆದಿತ್ಯನಾಥ್‌ ಗಿಂತ ಉತ್ತಮ ಆಡಳಿತಗಾರರಿಗೆ ನೀಡಬೇಕು, ವಿವಿಐಪಿ ಸಂಸ್ಕೃತಿಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News