ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣ | ಈಸಿ ಮೈ ಟ್ರಿಪ್ ಪ್ರವರ್ತಕ ನಿಶಾಂತ್ ಪಿಟ್ಟಿಗೆ ಸೇರಿದ ಹಲವು ಸ್ಥಳಗಳ ಮೇಲೆ ಈಡಿ ದಾಳಿ

PC : PTI
ಹೊಸದಿಲ್ಲಿ: ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿ ಈಝಿ ಮೈ ಟ್ರಿಪ್ ಪ್ರವರ್ತಕ ನಿಶಾಂತ್ ಪಿಟ್ಟಿ ನಂಟು ಹೊಂದಿದ ಹಲವು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಈಡಿ) ದಾಳಿ ನಡೆಸಿದೆ.
ದಿಲ್ಲಿ, ಮುಂಬೈ, ಗುರುಗ್ರಾಮ, ಚಂಡಿಗಢ, ಅಹ್ಮದಾಬಾದ್, ಇಂದೋರ್, ಜೈಪುರ, ಚೆನ್ನೈ ಹಾಗೂ ಸಾಂಬಲ್ಪುರ ಸೇರಿದಂತೆ 15 ಸ್ಥಳಗಳಲ್ಲಿ ಪ್ರಸ್ತುತ ದಾಳಿ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮಹಾದೇವ್ ಬೆಟ್ಟಿಂಗ್ ಆ್ಯಪ್‌ಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಹಾಗೂ ಕಾನೂನು ಬಾಹಿರ ಬೆಟ್ಟಿಂಗ್ ಕಾರ್ಯಾಚರಣೆ ಆರೋಪದ ತನಿಖೆಯ ಭಾಗವಾಗಿ ಈ ದಾಳಿ ನಡೆದಿದೆ. ಮಾರ್ಚ್ ನಲ್ಲಿ ಸಿಬಿಐ ಚತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರ ನಿವಾಸದ ಮೇಲೆ ದಾಳಿ ನಡೆಸಿತ್ತು.
ಈ ಪ್ರಕರಣಕ್ಕೆ ಮಹಾದೇವ್ ಬೆಟ್ಟಿಂಗ್ ಆ್ಯಪ್‌ಗೆ ನಂಟು ಹೊಂದಿದ ಕಾನೂನು ಬಾಹಿರ ಜೂಜಾಟ ಹಾಗೂ 15,000 ಕೋಟಿ ರೂ. ಸೈಬರ್ ವಂಚನೆ ಆರೋಪಿಸಿ ದಾಖಲಿಸಲಾದ ಎಫ್‌ಐಆರ್ ಮೂಲವಾಗಿದೆ. 2019ರ ಈ ವಂಚನೆ ಪ್ರಕರಣದಲ್ಲಿ ಆ್ಯಪ್ ನ ಪ್ರವರ್ತಕ ಸೌರಭ್ ಚಂದ್ರಾಕರ್, ರವಿ ಉಪ್ಪಲ್, ಶುಭಂ ಸೋನಿ ಹಾಗೂ ಇತರರು ಸೇರಿದಂತೆ 32 ಮಂದಿಯನ್ನು ಹೆಸರಿಸಲಾಗಿದೆ. ಇವರು ಜನರಿಗೆ ಸುಮಾರು 15,000 ಕೋಟಿ ರೂ. ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.