ಮಹಾರಾಷ್ಟ್ರ: ದರ್ಗಾ ನೆಲಸಮ ಕಾರ್ಯಾಚರಣೆ ಘರ್ಷಣೆಯಲ್ಲಿ 21 ಪೊಲೀಸರಿಗೆ ಗಾಯ

ನಾಸಿಕ್: ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ ಅನಧಿಕೃತ ಎಂದು ಹೇಳಲಾದ ದರ್ಗಾವನ್ನು ನೆಲಸಮಗೊಳಿಸುವ ಕಾರ್ಯಾಚರಣೆಯ ಸಂದರ್ಭ ನಡೆದ ಘರ್ಷಣೆಯಲ್ಲಿ 21 ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ ಹಾಗೂ 3 ಪೊಲೀಸ್ ವಾಹನಗಳಿಗೆ ಹಾನಿ ಉಂಟಾಗಿವೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಬಾಂಬೆ ಉಚ್ಚ ನ್ಯಾಯಾಲಯದ ಆದೇಶದಂತೆ ನಗರದ ಕಾತೆ ಗಲ್ಲಿ ಪ್ರದೇಶದಲ್ಲಿರುವ ಸತ್ಪೀರ್ ಬಾಬಾ ದರ್ಗಾವನ್ನು ನೆಲಸಮಗೊಳಿಸಲು ನಾಸಿಕ್ ಮಹಾನಗರ ಪಾಲಿಕೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದರು. ಇದಕ್ಕಿಂತ ಮುನ್ನ ಟ್ರಸ್ಟಿಗಳು ಉಚ್ಚ ನ್ಯಾಯಾಲಯದ ಆದೇಶದಂತೆ ದರ್ಗಾವನ್ನು ತೆರವುಗೊಳಿಸಲು ಮಂಗಳವಾರ ರಾತ್ರಿ 11.30ಕ್ಕೆ ಆಗಮಿಸಿದ್ದರು ಹಾಗೂ ಕಾರ್ಯಾಚರಣೆ ಆರಂಭಿಸಿದ್ದರು. ಈ ಸಂದರ್ಭ ದರ್ಗಾದ ಸಮೀಪದ ಉಸ್ಮಾನಿಯಾ ಚೌಕ್ ನಲ್ಲಿ ಜನರು ಸೇರಿ ವಿರೋಧ ವ್ಯಕ್ತಪಡಿಸಿದರು. ಅವರು ಸಮಾಧಾನಪಡಿಸಲು ಬಂದ ಟ್ರಸ್ಟಿಗಳು ಹಾಗೂ ಇತರರ ಮಾತುಗಳನ್ನು ಆಲಿಸಲಿಲ್ಲ ಎಂದು ಡಿಸಿಪಿ ಕಿರಣ್‌ಕುಮಾರ್ ಚವಾಣ್ ತಿಳಿಸಿದ್ದಾರೆ.
ಈ ಸಂದರ್ಭ ನಾಸಿಕ್ ಮಹಾನನಗರ ಪಾಲಿಕೆಯ ತೆರವು ಕಾರ್ಯಾಚರಣೆ ಸಿಬ್ಬಂದಿಯೊಂದಿಗೆ ಬಂದಿದ್ದ ಪೊಲೀಸರು ಕೂಡ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೆ, ಅವರು ಕೇಳಲಿಲ್ಲ. ಕಲ್ಲು ತೂರಾಟ ನಡೆಸಿದರು. ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು, ಅಶ್ರವಾಯು ಸೆಲ್‌ಗಳನ್ನು ಪ್ರಯೋಗಿಸಿದರು. ಹಿಂಸಾಚಾರದಲ್ಲಿ 21 ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ. 3 ಪೊಲೀಸ್ ವಾಹನಗಳಿಗೆ ಹಾನಿ ಉಂಟಾಗಿದೆ. ಈಗ ಪರಿಸ್ಥಿತಿ ಶಾಂತವಾಗಿದೆ ಎಂದು ಅವರು ತಿಳಿಸಿದ್ದಾರೆ.
ಅನಂತರ ನಾಸಿಕ್ ಮಹಾನಗರ ಪಾಲಿಕೆ (ಎನ್‌ಎಂಸಿ)ಸಿಬ್ಬಂದಿ ಬುಧವಾರ ಬೆಳಗ್ಗೆ ಸುಮಾರು 6 ಗಂಟೆಗೆ ಸತ್ಪೀರ್ ಬಾಬಾ ದರ್ಗಾವನ್ನು ನೆಲಸಮಗೊಳಿಸಿದರು ಎಂದು ಅವರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ 15ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಶಂಕಿತರಿಗೆ ಸೇರಿದ 57 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚವಾಣ್ ತಿಳಿಸಿದ್ದಾರೆ.
ನಾಸಿಕ್ ಮಹಾನಗರ ಪಾಲಿಕೆಯ ಅತಿಕ್ರಮಣ ತಡೆ ತಂಡ ಈ ವರ್ಷ ಫೆಬ್ರವರಿಯಲ್ಲಿ ಈ ದರ್ಗಾ ಸಮೀಪದ ಹಲವು ಅನಧಿಕೃತ ಕಟ್ಟಡಗಳನ್ನು ನೆಲಸಮಗೊಳಿಸಿತ್ತು ಎಂದು ಅವರು ಹೇಳಿದ್ದಾರೆ.