ಮಹಾರಾಷ್ಟ್ರ ವಿಧಾನಸಭಾ ಫಲಿತಾಂಶ : ಕುತೂಹಲ ಮೂಡಿಸಿದ ಐದು ಪ್ರಮುಖ ಕ್ಷೇತ್ರಗಳು
ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಅಧಿಕಾರವನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದ್ದರೆ, ಮಹಾ ವಿಕಾಸ್ ಅಘಾಡಿ (ಎಂವಿಎ) ಒಕ್ಕೂಟವು ರಾಜ್ಯದಲ್ಲಿ ಸರಕಾರ ರಚಿಸುವ ವಿಶ್ವಾಸದಲ್ಲಿದೆ.
ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳಿಗೆ 4,140 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇವುಗಳಲ್ಲಿ 234 ಕ್ಷೇತ್ರಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರೆ, 29 ಕ್ಷೇತ್ರಗಳು ಪರಿಶಿಷ್ಟ ಜಾತಿ ಮೀಸಲು ಮತ್ತು 25 ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ ಮೀಸಲು ಕ್ಷೇತ್ರವಾಗಿದೆ. ಚುನಾವಣಾ ಅಖಾಡದಲ್ಲಿ ಘಟಾನುಘಟಿ ನಾಯಕರಿದ್ದು, ಐದು ಪ್ರಮುಖ ಕ್ಷೇತ್ರಗಳ ಫಲಿತಾಂಶ ಕುತೂಹಲ ಮೂಡಿಸಿದೆ.
ಮಹಾರಾಷ್ಟ್ರದಲ್ಲಿ ಕುತೂಹಲ ಮೂಡಿಸಿದ ಪ್ರಮುಖ ಐದು ಕ್ಷೇತ್ರಗಳು
1. ವರ್ಲಿ ಕ್ಷೇತ್ರ:
ವರ್ಲಿ ಕ್ಷೇತ್ರ ರಾಜ್ಯದಲ್ಲಿ ಭಾರೀ ಕುತೂಹಲ ಕೆರಳಿಸಿದ ಕ್ಷೇತ್ರವಾಗಿದ್ದು, ಶಿಂಧೆ ನೇತೃತ್ವದ ಶಿವಸೇನೆಯಿಂದ ಮಿಲಿಂದ್ ದಿಯೋರಾ, ಉದ್ದವ್ ನೇತೃತ್ವದ ಶಿವಸೇನೆಯಿಂದ ಆದಿತ್ಯ ಠಾಕ್ರೆ ಮತ್ತು ಎಂಎನ್ಎಸ್ ನಿಂದ ಸಂದೀಪ್ ದೇಶಪಾಂಡೆ ಕಣದಲ್ಲಿದ್ದಾರೆ.
2. ಬಾರಾಮತಿ ಕ್ಷೇತ್ರ:
ಬಾರಮತಿ ಕ್ಷೇತ್ರದಲ್ಲಿ ಮಹರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ (ಎನ್ಸಿಪಿ) ಮತ್ತು ಶರದ್ ಪವಾರ್ ಬಣದ ಎನ್ ಸಿಪಿಯಿಂದ ಯುಗೇಂದ್ರ ಪವಾರ್ ಕಣದಲ್ಲಿದ್ದಾರೆ. ಅಜಿತ್ ಪವಾರ್ ಅವರು 1991ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಬಾರಿ ಎನ್ ಸಿಪಿ ವಿಭಜನೆಯಾದ ಹಿನ್ನೆಲೆ ಫಲಿತಾಂಶ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
3. ವಂಡ್ರೆ ಪೂರ್ವ ಕ್ಷೇತ್ರ:
ವಂಡ್ರೆ ಪೂರ್ವ ಕ್ಷೇತ್ರದಲ್ಲಿ ಎನ್ ಸಿಪಿಯಿಂದ ಜೀಶನ್ ಸಿದ್ದೀಕಿ ಮತ್ತು ಶಿವಸೇನೆಯಿಂದ ವರುಣ್ ಸರ್ದೇಸಾಯಿ ಸ್ಪರ್ಧೆಯಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಮುಸ್ಲಿಂ ಮತದಾರರಿದ್ದು, ವರುಣ್ ಸರ್ದೇಸಾಯಿ ಕೂಡ ಕ್ಷೇತ್ರದಲ್ಲಿ ತನ್ನದೇ ಆದ ಪ್ರಾಬಲ್ಯವನ್ನು ಹೊಂದಿದ್ದಾರೆ. ಆದ್ದರಿಂದ ಚುನಾವಣೆ ಫಲಿತಾಂಶ ಕುತೂಹಲವನ್ನು ಮೂಡಿಸಿದೆ.
4. ನಾಗ್ಪುರ ನೈರುತ್ಯ ಕ್ಷೇತ್ರ:
ನಾಗ್ಪುರ ನೈರುತ್ಯ ಕ್ಷೇತ್ರದಿಂದ ಬಿಜೆಪಿಯಿಂದ ಹಾಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಕಾಂಗ್ರೆಸ್ ನಿಂದ ಪ್ರಫುಲ್ ಗುಡಧೆ ಸ್ಪರ್ಧಿಸುತ್ತಿದ್ದಾರೆ. ಇಬ್ಬರು ಅಭ್ಯರ್ಥಿಗಳ ನಡುವೆ ಭಾರೀ ಪೈಪೋಟಿಯಿದ್ದು, ಫಲಿತಾಂಶ ಕುತೂಹಲ ಮೂಡಿಸಿದೆ.
5. ಕೊಪ್ರಿ-ಪಚ್ಪಖಾಡಿ ಕ್ಷೇತ್ರ :
ಕೊಪ್ರಿ-ಪಚ್ಪಖಾಡಿ ಕ್ಷೇತ್ರದಲ್ಲಿ ಶಿವಸೇನೆಯಿಂದ ಹಾಲಿ ಸಿಎಂ ಏಕನಾಥ್ ಶಿಂಧೆ ಮತ್ತು ಉದ್ಧವ್ ಬಣದ ಶಿವಸೇನೆಯಿಂದ ಕೇದಾರ್ ದಿಘೆ ಕಣದಲ್ಲಿದ್ದು, ಶಿವಸೇನೆಯ ಈ ಭದ್ರಕೋಟೆ ಯಾವ ಬಣದ ಪಾಲಾಗಲಿದೆ ಎಂದು ಕಾದು ನೋಡಬೇಕಿದೆ.