ಮುಂದುವರಿದ ಮಹಾರಾಷ್ಟ್ರ ಮುಖ್ಯಮಂತ್ರಿ ನಿಗೂಢತೆ : ತವರು ಗ್ರಾಮಕ್ಕೆ ತೆರಳಿದ ಅಸಮಾಧಾನಿತ ಏಕನಾಥ್ ಶಿಂದೆ
ಮುಂಬೈ : ಪ್ರತಿಕೂಲ ಹವಾಮಾನದಿಂದ ಅನಾರೋಗ್ಯಕ್ಕೀಡಾಗಿರುವ ಮಹಾರಾಷ್ಟ್ರ ಉಸ್ತುವಾರಿ ಮುಖ್ಯಮಂತ್ರಿ ಏಕನಾಥ್ ಶಿಂದೆ ಶುಕ್ರವಾರ ಸಂಜೆ ಸತಾರ ಜಿಲ್ಲೆಯಲ್ಲಿರುವ ತಮ್ಮ ತವರು ತಲುಪಿದ್ದು, ಬಿಜೆಪಿಯ ಶಾಸಕಾಂಗ ಸಭೆ ಇನ್ನಷ್ಟೆ ನಡೆಯಬೇಕಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಭಾರಿ ಬಹುಮತ ಗಳಿಸಿ ಒಂದು ವಾರ ಕಳೆದಿದ್ದರೂ, ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನು ಇದುವರೆಗೂ ಆಯ್ಕೆ ಮಾಡಲಾಗಿಲ್ಲ.
ಬಿಜೆಪಿ-ಶಿವಸೇನೆ-ಎನ್ಸಿಪಿ ಮೈತ್ರಿಕೂಟ ಭಾರಿ ಬಹುಮತ ಗಳಿಸಿದ್ದರೂ, ಸರಕಾರ ರಚನೆ ವಿಳಂಬಗೊಂಡಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ಮಾತ್ರ ಸರಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾರೊಂದಿಗೆ ಏಕನಾಥ್ ಶಿಂದೆ ಸುದೀರ್ಘ ಸಭೆ ನಡೆಸಿದ ನಂತರ ಈ ಬೆಳವಣಿಗೆ ನಡೆದಿದೆ. ಈ ಸಭೆಗೆ ಕೆಲ ಕಾಲದ ನಂತರ ಎನ್ಸಿಪಿ ಅಧ್ಯಕ್ಷ ಅಜಿತ್ ಪವಾರ್ರೊಂದಿಗೆ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಹೇಳಲಾಗುತ್ತಿರುವ ದೇವೇಂದ್ರ ಫಡ್ನವಿಸ್ ಹಾಜರಾಗಿದ್ದರು. ಇವರೊಂದಿಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡಾ ಸಭೆಯಲ್ಲಿ ಉಪಸ್ಥಿತರಿದ್ದರು.
ಮತ್ತೊಂದು ಅವಧಿಗೆ ಅಥವಾ ಎರಡೂವರೆ ವರ್ಷಗಳ ಅವಧಿಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಬಯಸುತ್ತಿರುವ ಏಕನಾಥ್ ಶಿಂದೆ ಬಿಜೆಪಿಯ ವರ್ತನೆಯಿಂದ ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ.
ಬಿಜೆಪಿ ಮುಖ್ಯಮಂತ್ರಿಗೆ ಅವರು ಹಾದಿಯನ್ನು ಸುಗಮಗೊಳಿಸಿದ್ದರೂ, ಗೃಹ ಮತ್ತು ನಗರಾಭಿವೃದ್ಧಿ ಖಾತೆಗಳಿಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದ್ದು, ಈ ಬೇಡಿಕೆಗೆ ಬಿಜೆಪಿ ಒಪ್ಪಿಗೆ ಸೂಚಿಸಿಲ್ಲ ಎಂದು ಹೇಳಲಾಗಿದೆ. ಇದರೊಂದಿಗೆ, ವಿಧಾನಸಭಾ ಸ್ಪೀಕರ್ ಸ್ಥಾನಕ್ಕೂ ಶಿವಸೇನೆ ಬೇಡಿಕೆ ಇಟ್ಟಿದೆ ಎಂದು ವರದಿಯಾಗಿದೆ.
ಆದರೆ, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯಾಗಿ ತಾವು ನೇತೃತ್ವ ವಹಿಸಿದ್ದ ಗೃಹ ಖಾತೆಯನ್ನು ಬಿಟ್ಟುಕೊಡಲು ದೇವೇಂದ್ರ ಫಡ್ನವಿಸ್ ಸಮ್ಮತಿ ಸೂಚಿಸಿಲ್ಲ. ಹೀಗಾಗಿ ಏಕನಾಥ್ ಶಿಂದೆ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ.
ಎರಡು ಬಾರಿ ಮುಖ್ಯಮಂತ್ರಿ ಹಾಗೂ ಒಂದು ಬಾರಿ ಉಪ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿದ್ದು, ಅವರೊಂದಿಗೆ ಇನ್ನೂ ಕೆಲವರ ಹೆಸರು ಮುಖ್ಯಮಂತ್ರಿ ಹುದ್ದೆಗೆ ಕೇಳಿ ಬಂದಿದೆ ಎನ್ನಲಾಗಿದೆ.
ಬಿಜೆಪಿಯ ಶಾಸಕಾಂಗ ಸಭೆ ನಡೆದು, ಅಲ್ಲಿ ಪಕ್ಷದ ಅಧಿಕೃತ ಶಾಸಕಾಂಗ ನಾಯಕನ ಆಯ್ಕೆಯಾಗುವುದು ಇನ್ನೂ ಬಾಕಿ ಇರುವುದರಿಂದ, ಶುಕ್ರವಾರ ನಿಗದಿಪಡಿಸಲಾಗಿದ್ದ ಮಹಾಯುತಿ ಮೈತ್ರಿಕೂಟದ ಸಭೆಯನ್ನು ಮುಂದೂಡಲಾಗಿದೆ.
ಈ ನಡುವೆ, ಒಂದೆರಡು ದಿನ ತಮ್ಮ ತವರು ಗ್ರಾಮದಲ್ಲಿ ಉಳಿದುಕೊಳ್ಳಲಿರುವ ಏಕನಾಥ್ ಶಿಂದೆ, ರವಿವಾರ ಸಂಜೆ ಅಥವಾ ಸೋಮವಾರ ಬೆಳಗ್ಗೆ ಮುಂಬೈಗೆ ಮರಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.