ಮುಸ್ಲಿಮರಿಗೆ ಟಿಕೆಟ್ ಇಲ್ಲ: ಪ್ರಚಾರಕ್ಕೆ ನಿರಾಕರಿಸಿದ ಮಹಾರಾಷ್ಟ್ರ ಕಾಂಗ್ರೆಸ್ ಮುಖಂಡ
ಮುಂಬೈ: ರಾಜ್ಯದಲ್ಲಿ 48 ಲೋಕಸಭಾ ಕ್ಷೇತ್ರಗಳ ಪೈಕಿ ಎಲ್ಲೂ ಮುಸ್ಲಿಮರಿಗೆ ಟಿಕೆಟ್ ನೀಡದ ಪಕ್ಷದ ನಿರ್ಧಾರವನ್ನು ಖಂಡಿಸಿ ಹಿರಿಯ ಮುಖಂಡ ಆರೀಫ್ ನಸೀಮ್ ಖಾನ್ ಪಕ್ಷದ ಮೂರು ಸಮಿತಿಗಳಿಗೆ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿರುವ ನಸೀಮ್ ಖಾನ್, ಕಾಂಗ್ರೆಸ್‍ಗೆ ಮುಸ್ಲಿಂ ಮತಗಳು ಬೇಕು. ಆದರೆ ಏಕೆ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ಉತ್ತರ ಕೇಂದ್ರ ಮುಂಬೈ ಕ್ಷೇತ್ರದಿಂದ ವರ್ಷಾ ಗಾಯಕ್‍ವಾಡ್ ಅವರನ್ನು ಕಣಕ್ಕೆ ಇಳಿಸಿದ ಕ್ರಮದಿಂದ ನಸೀಮ್ ಅಸಮಾಧಾನಗೊಂಡಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. ಈ ಕ್ಷೇತ್ರದಿಂದ ನಸೀಮ್ ಆಕಾಂಕ್ಷಿಯಾಗಿದ್ದರು.
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ತಾರಾ ಪ್ರಚಾರಕರಾಗಿದ್ದರೂ, ಕಾಂಗ್ರೆಸ್ ಪರ ಪ್ರಚಾರ ಮಾಡದಿರಲು ಕೂಡಾ ಅವರು ನಿರ್ಧರಿಸಿದ್ದಾರೆ.
"ಗುಜರಾತ್, ಗೋವಾ, ಕರ್ನಾಟಕ, ತೆಲಂಗಾಣ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಹೀಗೆ ಯಾವುದೇ ರಾಜ್ಯದಲ್ಲಿ ಚುನಾವಣೆಯ ಜವಾಬ್ದಾರಿ ನೀಡಿದಾಗ ನಾನು ಪ್ರಾಮಾಣಿಕವಾಗಿ, ದಕ್ಷವಾಗಿ ಕೆಲಸ ಮಾಡಿದ್ದೆ. ಈ ಎಲ್ಲ ಕಾರಣದಿಂದಾಗಿ ನನಗೆ ಮುಸ್ಲಿಮರನ್ನು ಮತ್ತು ಮುಸ್ಲಿಂ ಸಂಘಟನೆಗಳನ್ನು ಎದುರಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.