‘ಲಾಡ್ಕಿ ಬಹಿಣ್’ಯೋಜನೆಯಡಿ 8 ಲಕ್ಷ ಮಹಿಳೆಯರ ಮಾಸಾಶನ 1,500 ರೂ.ಗಳಿಂದ 500 ರೂ.ಗೆ ತಗ್ಗಿಸಿದ ಮಹಾರಾಷ್ಟ್ರ ಸರಕಾರ

Update: 2025-04-16 17:47 IST
‘ಲಾಡ್ಕಿ ಬಹಿಣ್’ಯೋಜನೆಯಡಿ 8 ಲಕ್ಷ ಮಹಿಳೆಯರ ಮಾಸಾಶನ 1,500 ರೂ.ಗಳಿಂದ 500 ರೂ.ಗೆ ತಗ್ಗಿಸಿದ ಮಹಾರಾಷ್ಟ್ರ ಸರಕಾರ
PC : mahasamvad.in
  • whatsapp icon

ಮುಂಬೈ: ಮಹಾರಾಷ್ಟ್ರ ಸರಕಾರವು ತನ್ನ ಮುಖ್ಯಮಂತ್ರಿ ಮಾಝಿ ಲಾಡ್ಕಿ ಬಹಿಣ ಯೋಜನೆಯಡಿ ಎಂಟು ಲಕ್ಷ ಮಹಿಳೆಯರಿಗೆ ಮಾಸಿಕ ಹಣಪಾವತಿಯನ್ನು 1,500 ರೂ.ಗಳಿಂದ 500 ರೂ.ಗಳಿಗೆ ತಗ್ಗಿಸಿದೆ. ಈ ಮಹಿಳೆಯರು ನಮೋ ಶೇತ್ಕರಿ ಮಹಾಸನ್ಮಾನ ನಿಧಿ ಯೋಜನೆಯಡಿಯೂ ಮಾಸಿಕ 1,000 ರೂ.ಗಳನ್ನು ಸ್ವೀಕರಿಸುತ್ತಿರುವುದು ಈ ಕಡಿತಕ್ಕೆ ಕಾರಣವಾಗಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

ಲಾಡ್ಕಿ ಬಹಿಣ ಯೋಜನೆಯ ನಿಯಮಗಳಡಿ ಫಲಾನುಭವಿಗಳು ತಮ್ಮ ಒಟ್ಟು ಮಾಸಿಕ ಸ್ವೀಕೃತಿಯು 1,500 ರೂ.ಗಳನ್ನು ಮೀರದಿದ್ದರೆ ಮಾತ್ರ ಇತರ ಸರಕಾರಿ ನೆರವನ್ನು ಪಡೆಯಬಹುದು. ಈ ಕಡಿತವು ಅರ್ಹತಾ ಮಾನದಂಡಗಳನ್ನು ಪೂರೈಸುವವರಿಗೆ ಮಾತ್ರ ಸೀಮಿತವಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಸರಕಾರವು ನಡೆಸುತ್ತಿರುವ ಪರಿಶೀಲನೆಯ ಭಾಗವಾಗಿದೆ.

ಪರಿಶೀಲನೆಯಿಂದ ಫಲಾನುಭವಿಗಳ ಸಂಖ್ಯೆ 10ರಿಂದ 15 ಲಕ್ಷದಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಈ ಹಿಂದೆ ಹೇಳಿದ್ದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು,‘ನಾವು ಮಾನದಂಡಗಳನ್ನು ಬದಲಿಸುತ್ತಿಲ್ಲ. ಅರ್ಹರಿಗೆ ಮಾತ್ರ ಮಾಸಿಕ ನೆರವು ಸಿಗುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದೇವೆ’ ಎಂದು ತಿಳಿಸಿದ್ದರು.

ಅಕ್ಟೋಬರ್ ವೇಳೆಗೆ ಯೋಜನೆಯಡಿ ಸುಮಾರು 2.63 ಕೋಟಿ ಅರ್ಜಿಗಳು ಸ್ವೀಕೃತವಾಗಿದ್ದು, ಫೆಬ್ರವರಿಯಲ್ಲಿ ಪರಿಶೀಲನೆಯ ಬಳಿಕ ಸಂಖ್ಯೆ 2.52 ಕೋಟಿ ಗೆ ಇಳಿದಿತ್ತು. ಫೆಬ್ರವರಿ ಮತ್ತು ಮಾರ್ಚ್ ನಲ್ಲಿ 2.46 ಕೋಟಿ ಫಲಾನುಭವಿಗಳು ಯೋಜನೆಯ ಲಾಭ ಪಡೆದಿದ್ದರು.

ಯೋಜನೆಗೆ ಅರ್ಹ ಫಲಾನುಭವಿಗಳು 18ರಿಂದ 65 ವರ್ಷದೊಳಗಿನವರಾಗಿರಬೇಕು ಮತ್ತು ರಾಜ್ಯದಲ್ಲಿ ವಾಸವಾಗಿರಬೇಕು. ಕೌಟುಂಬಿಕ ಆದಾಯ ವಾರ್ಷಿಕ 2.5 ಲಕ್ಷ ರೂ.ಗಿಂತ ಕಡಿಮೆಯಿರಬೇಕು. ಸರಕಾರಿ ನೌಕರರಿರುವ ಅಥವಾ ನಾಲ್ಕು ಚಕ್ರಗಳ ವಾಹನಗಳನ್ನು ಹೊಂದಿರುವ ಕುಟುಂಬಗಳು ಅರ್ಹರಲ್ಲ.

ಸರಕಾರವು ಎಂಟು ಲಕ್ಷ ಮಹಿಳೆಯರಿಗೆ ಮಾಸಿಕ ಪಾವತಿಯನ್ನು ಕಡಿತಗೊಳಿಸುವ ಮೂಲಕ ಸಾರ್ವಜನಿಕರಿಗೆ ದ್ರೋಹ ಬಗೆದಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಪ್ರಕಟಿಸಲಾಗಿತ್ತು. ಯೋಜನೆಯ ಉದ್ದೇಶ ಪೂರ್ಣಗೊಂಡಿರುವುದರಿಂದ ಈಗ ಸರಕಾರವು ಅದನ್ನು ನಿಲ್ಲಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈಗಾಗಲೇ ಕೆಲವು ಫಲಾನುಭವಿಗಳಿಗೆ ಮಾಸಿಕ ಪಾವತಿಯನ್ನು 500 ರೂ.ಗೆ ತಗ್ಗಿಸಲಾಗಿದೆ,ಶೀಘ್ರವೇ ಅದು ಶೂನ್ಯಕ್ಕೆ ಇಳಿಯಲಿದೆ. ಸರಕಾರವು ಅಧಿಕಾರಕ್ಕೆ ಬಂದ ಐದೇ ತಿಂಗಳಲ್ಲಿ ಜನರಿಗೆ ದ್ರೋಹ ಬಗೆಯಲಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಮಹಾಯುತಿ ನಾಯಕರು 1,500 ರೂ.ಗಳ ಭರವಸೆ ನೀಡಿದ್ದರು ಮತ್ತು ನಂತರ ಅದನ್ನು ಮಾಸಿಕ 2,100 ರೂ.ಗೆ ಹೆಚ್ಚಿಸುವ ಭರವಸೆಯನ್ನೂ ನೀಡಿದ್ದರು,ಆದರೆ ಬದಲಾಗಿ ಅವರು ಅದನ್ನು ಕಡಿಮೆ ಮಾಡುತ್ತಿದ್ದಾರೆ. ಯೋಜನೆಯು ಮತದಾರರನ್ನು ಆಕರ್ಷಿಸಲು ಚುನಾವಣಾ ಗಿಮಿಕ್ ಅಲ್ಲದೆ ಬೇರೇನೂ ಅಲ್ಲ. ಮಹಾಯುತಿಯು ಜನರನ್ನು ದಾರಿ ತಪ್ಪಿಸಿದ್ದು,ಈಗ ಅದು ಬಹಿರಂಗಗೊಳ್ಳುತ್ತಿದೆ ಎಂದು ಶಿವಸೇನೆ(ಯುಬಿಟಿ) ಹೇಳಿದೆ.

ರಾಜ್ಯದ 2025-26ರ ಬಜೆಟ್ನಲ್ಲಿ ಲಾಡ್ಕಿ ಬಹಿಣ ಯೋಜನೆಗೆ ಹಂಚಿಕೆಯನ್ನು 46,000 ಕೋಟಿ ರೂ.ಗಳಿಂದ 36,000 ಕೋಟಿ ರೂ.ಗಳಿಗೆ ತಗ್ಗಿಸಲಾಗಿದೆ. ಇದೇ ಅವಧಿಯಲ್ಲಿ ಸರಕಾರದ ಒಟ್ಟಾರೆ ಸಾಲವು 9.3 ಲಕ್ಷ ಕೋಟಿ ರೂ.ಗಳಿಗೆ ತಲುಪುವ ನಿರೀಕ್ಷೆಯಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News