ವಕ್ಫ್ ತಿದ್ದುಪಡಿ ಕಾಯಿದೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ (PTI)
ಹೊಸದಿಲ್ಲಿ : ವಕ್ಫ್ ತಿದ್ದುಪಡಿ ಕಾಯಿದೆ-2025ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈಗಾಗಲೇ ಎಐಎಂಐಎಂ ನಾಯಕ ಅಸಾದುದ್ದೀನ್ ಉವೈಸಿ ಸಲ್ಲಿಸಿದ ಅರ್ಜಿ ಸೇರಿದಂತೆ ಇತರ 10 ಅರ್ಜಿಗಳನ್ನು ಎಪ್ರಿಲ್ 16ರಂದು ವಿಚಾರಣೆಗೆ ಪಟ್ಟಿ ಮಾಡಿದೆ.
ʼವಕ್ಫ್ ತಿದ್ದುಪಡಿ ಕಾಯ್ದೆಯು ಸಂವಿಧಾನದಲ್ಲಿ ಪ್ರತಿಪಾದಿಸಿರುವ ಹಲವಾರು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ. ಕಾನೂನು ರಚನೆ ಪ್ರಕ್ರಿಯೆಯಲ್ಲಿ ಸಂಸದೀಯ ಪದ್ಧತಿಗಳ ಉಲ್ಲಂಘನೆ ಮಾಡಲಾಗಿದೆ. ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷರು ವಕ್ಫ್ ತಿದ್ದುಪಡಿ ಮಸೂದೆಯ ಕುರಿತ ಜಂಟಿ ಸಂಸದೀಯ ಸಮಿತಿಯ ಕರಡು ವರದಿಯ ಪರಿಗಣನೆ, ಅಂಗೀಕಾರ ಮತ್ತು ಸಂಸತ್ತಿನಲ್ಲಿ ಮಂಡಿಸುವ ವೇಳೆ ಸಂಸದೀಯ ನಿಯಮಗಳನ್ನು ಉಲ್ಲಂಘಿಸಿದ್ದಾರೆʼ ಎಂದು ಮಹುವಾ ಮೊಯಿತ್ರಾ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಮೊದಲು ಎಐಎಂಐಎಂ ನಾಯಕ ಅಸಾದುದ್ದೀನ್ ಉವೈಸಿ, ಎಎಪಿ ನಾಯಕ ಅಮಾನತುಲ್ಲಾ ಖಾನ್, ನಾಗರಿಕ ಹಕ್ಕುಗಳ ರಕ್ಷಣಾ ಸಂಘ, ಅರ್ಷದ್ ಮದನಿ, ಸಮಸ್ತ ಕೇರಳ ಜಮೀಯತುಲ್ ಉಲೇಮಾ, ಅಂಜುಮ್ ಖಾದ್ರಿ, ತೈಯಬ್ ಖಾನ್ ಸಲ್ಮಾನಿ, ಮುಹಮ್ಮದ್ ಶಫಿ, ಮುಹಮ್ಮದ್ ಫಝಲುರಹೀಂ, ಆರ್‌ಜೆಡಿ ನಾಯಕ ಮನೋಜ್ ಕುಮಾರ್ ಝಾ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಜಮಿಯತ್ ಉಲಮಾ-ಇ-ಹಿಂದ್, ಡಿಎಂಕೆ, ಕಾಂಗ್ರೆಸ್ ಸಂಸದ ಮುಹಮ್ಮದ್ ಜಾವೇದ್ ಅವರು ವಕ್ಫ್ ತಿದ್ದುಪಡಿ ಕಾಯಿದೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.