ವಂಚನೆ ಆರೋಪದ ಬಳಿಕ ಸತತ ಎರಡನೇ ದಿನವೂ ಅದಾನಿ ಷೇರುಗಳ ಮೌಲ್ಯ ಕುಸಿತ
ಹೊಸದಿಲ್ಲಿ: ಉದ್ಯಮಿ ಗೌತಮ್ ಅದಾನಿ ವಿರುದ್ದ ಯುಎಸ್ ಪ್ರಾಸಿಕ್ಯೂಟರ್ ವಂಚನೆ ಮತ್ತು ಲಂಚದ ಆರೋಪ ಹೊರಿಸಿರುವ ನಂತರ ಅದಾನಿ ಸಮೂಹದ ಷೇರುಗಳ ಮೌಲ್ಯ ಕುಸಿತ ಕಂಡಿದ್ದು, ಇದು ಎರಡನೇ ದಿನವೂ ಮುಂದುವರಿದಿದೆ.
ಶುಕ್ರವಾರ ಬೆಳಗಿನ ವಹಿವಾಟಿನಲ್ಲಿ ಅದಾನಿ ಸಮೂಹದ 10 ಕಂಪೆನಿಗಳ ಪೈಕಿ ಎಂಟು ಕಂಪೆನಿಗಳ ಷೇರುಗಳ ಮೌಲ್ಯ ಕುಸಿತವಾಗಿರುವುದು ಕಂಡು ಬಂದಿದೆ. ಅದಾನಿ ಗ್ರೀನ್ ಎನರ್ಜಿ ಷೇರು 10.95% ದಷ್ಟು ಕುಸಿದಿದೆ ಮತ್ತು ಅದಾನಿ ಎನರ್ಜಿ ಸೊಲ್ಯೂಷನ್ಸ್ ಷೇರು 8.57% ಕುಸಿದು ಬಿಎಸ್ಇಯಲ್ಲಿ 52 ವಾರಗಳ ಕನಿಷ್ಠ ಅಂದರೆ 637.85ಕ್ಕೆ ತಲುಪಿದೆ.
ಅದಾನಿ ಸಮೂಹದ ಪ್ರಮುಖ ಸಂಸ್ಥೆಯಾದ ಅದಾನಿ ಎಂಟರ್ ಪ್ರೈಸಸ್ ಷೇರುಗಳು 6.98% ದಷ್ಟು ಕುಸಿದಿದೆ. ಅದಾನಿ ಪವರ್ ನ ಷೇರುಗಳು 6.38%, ಅದಾನಿ ಟೋಟಲ್ ಗ್ಯಾಸ್ ಷೇರು 6.11%, ಅದಾನಿ ಪೋರ್ಟ್ಸ್ ಷೇರುಗಳಲ್ಲಿ 5.31%, ಅದಾನಿ ವಿಲ್ಮರ್ ಷೇರುಗಳಲ್ಲಿ 5.17% ಮತ್ತು ಎನ್ಡಿಟಿವಿ ಷೇರುಗಳಲ್ಲಿ ಶೇಕಡಾ 3.41ರಷ್ಟು ಕುಸಿದಿದೆ.
ಉದ್ಯಮಿ ಗೌತಮ್ ಅದಾನಿ ವಿರುದ್ದ ಯುಎಸ್ ಪ್ರಾಸಿಕ್ಯೂಟರ್ಗಳು ವಂಚನೆ ಮತ್ತು ಲಂಚದ ಆರೋಪ ಹೊರಿಸಿರುವ ಬೆನ್ನಲ್ಲೇ ಗುರುವಾರ ಷೇರುಪೇಟೆ ವಹಿವಾಟಿನಲ್ಲಿ ಅದಾನಿ ಸಮೂಹದ ಕಂಪನಿಗಳ ಷೇರಿನ ಮೌಲ್ಯ ಶೇ. 20ರಷ್ಟು ಕುಸಿತ ಕಂಡಿತ್ತು.