ಮಲೇಶ್ಯ ಓಪನ್ ಬ್ಯಾಡ್ಮಿಂಟನ್ ಟೂರ್ನಿ | ಪ್ರಣಯ್, ಮಾಳವಿಕಾ ಪ್ರಿ-ಕ್ವಾರ್ಟರ್ ಫೈನಲ್‌ಗೆ

Update: 2025-01-08 15:40 GMT

ಪ್ರಣಯ್ | PC :  PTI 

ಕೌಲಾಲಂಪುರ: ಅನುಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ಪಂದ್ಯಗಳಲ್ಲಿ ಜಯ ಸಾಧಿಸಿರುವ ಶಟ್ಲರ್‌ಗಳಾದ ಎಚ್.ಎಸ್. ಪ್ರಣಯ್ ಹಾಗೂ ಮಾಳವಿಕಾ ಬನ್ಸೋಡ್ ಮಲೇಶ್ಯ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬುಧವಾರ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ಭಾರತದ ಡಬಲ್ಸ್ ಜೋಡಿ ಕೂಡ ಯಶಸ್ಸು ಸಾಧಿಸಿದೆ. ತನಿಶಾ ಕ್ರಾಸ್ಟೊ ಹಾಗೂ ಧ್ರುವ ಕಪಿಲಾ ಅವರೊಂದಿಗೆ ಸತೀಶ್ ಕುಮಾರ್ ಹಾಗೂ ಆದ್ಯಾ ವರಿಯತ್ ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ಮಳೆಯಿಂದಾಗಿ ಮೇಲ್ಛಾವಣಿ ಸೋರುತ್ತಿದ್ದ ಕಾರಣ ಮಂಗಳವಾರ ಸ್ಥಗಿತವಾಗಿದ್ದ ಎಚ್.ಎಸ್. ಪ್ರಣಯ್ ಅವರ ಸಿಂಗಲ್ಸ್ ಪಂದ್ಯವು ಇಂದು ಮುಂದುವರಿಯಿತು. ಕೇರಳದ ಆಟಗಾರ ಪ್ರಣಯ್ ಅವರು ಬ್ರಿಯಾನ್ ಯಾಂಗ್‌ರನ್ನು 21-12, 17-21. 21-15 ಗೇಮ್‌ಗಳ ಅಂತರದಿಂದ ಮಣಿಸಿದರು.

ನಿರಂತರವಾಗಿ ಮಳೆ ನೀರು ಸೋರಿಕೆಯಾದ ಕಾರಣ ಮಂಗಳವಾರ ಪಂದ್ಯ ಸ್ಥಗಿತಗೊಂಡಿದ್ದಾಗ ಯಾಂಗ್ ಅವರು 2ನೇ ಗೇಮ್‌ನಲ್ಲಿ 11-9ರಿಂದ ಮುನ್ನಡೆಯಲ್ಲಿದ್ದರು. ಪ್ರಣಯ್ ತನ್ನ 2ನೇ ಗೇಮ್ ಸೋತ ನಂತರ 3ನೇ ಗೇಮ್‌ನಲ್ಲಿ ತಿರುಗೇಟು ನೀಡಿ 21-15 ಅಂತರದಿಂದ ಜಯಶಾಲಿಯಾದರು. ಪಂದ್ಯವು ಒಂದು ಗಂಟೆ, 29 ನಿಮಿಷಗಳ ಕಾಲ ನಡೆಯಿತು.

ಪ್ರಣಯ್ ಮುಂದಿನ ಸುತ್ತಿನಲ್ಲಿ ಚೀನಾದ 7ನೇ ಶ್ರೇಯಾಂಕದ ಆಟಗಾರ ಶಿ ಫೆಂಗ್ ಲಿ ಅವರನ್ನು ಎದುರಿಸಲಿದ್ದಾರೆ. ಲಿ ಅವರ ಪ್ರಿಯಾಂಶು ರಾಜಾವತ್‌ರನ್ನು 21-11, 21-16 ಗೇಮ್‌ಗಳ ಅಂತರದಿಂದ ಸೋಲಿಸಿದರು.

45 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಮಾಳವಿಕಾ ಬನ್ಸೋಡ್ ಅವರು ಸ್ಥಳೀಯ ಆಟಗಾರ್ತಿ ಗೊಹ್ ಜಿನ್ ವೀ ಅವರನ್ನು 21-15, 21-16 ಅಂತರದಿಂದ ಮಣಿಸಿದರು.

ಮಿಶ್ರ ಡಬಲ್ಸ್ ಪಂದ್ಯದಲ್ಲಿ ಕಪಿಲಾ ಹಾಗೂ ಕ್ರಾಸ್ಟೊ ದಕ್ಷಿಣ ಕೊರಿಯಾದ ಸಂಗ್ ಹ್ಯೂನ್ ಕೊ ಹಾಗೂ ಹೀ ವನ್ ಯೊಮ್‌ರನ್ನು 21-13, 21-14 ಗೇಮ್‌ಗಳ ಅಂತರದಿಂದ ಸೋಲಿಸಿದರು. ಭಾರತದ ಜೋಡಿ ಮುಂದಿನ ಸುತ್ತಿನಲ್ಲಿ 7ನೇ ಶ್ರೇಯಾಂಕದ ಚೀನಾದ ಜೋಡಿ ಕ್ಸಿಂಗ್ ಚೆಂಗ್ ಹಾಗೂ ಚಿ ಝಾಂಗ್‌ರನ್ನು ಎದುರಿಸಲಿದೆ.

ಸತೀಶ್ ಹಾಗೂ ಆದಿತ್ಯ ಭಾರತದ ಸಹ ಆಟಗಾರರಾದ ಆಶಿತ್ ಸೂರ್ಯ ಹಾಗೂ ಅಮೃತಾ ಪ್ರಮುತೇಶ್‌ರನ್ನು 21-13, 21-15 ಗೇಮ್‌ಗಳ ಅಂತರದಿಂದ ಸೋಲಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ಮಲೇಶ್ಯದ 4ನೇ ಶ್ರೇಯಾಂಕದ ಜೋಡಿ ಸೂನ್ ಹುಯಾಟ್ ಹಾಗೂ ಶೆವೊನ್ ಜೆಮಿ ಅವರ ಸವಾಲು ಎದುರಿಸಲಿದ್ದಾರೆ.

ಮಹಿಳೆಯರ ಡಬಲ್ಸ್‌ನಲ್ಲಿ ಭಾರತದ ಜೋಡಿ ರುತುಪರ್ಣ ಪಾಂಡಾ ಹಾಗೂ ಶ್ವೇತಪರ್ಣ ಪಾಂಡಾ ಹಿನ್ನಡೆ ಎದುರಿಸಿದರು. ಪಾಂಡಾ ಜೋಡಿಯು ಥಾಯ್ಲೆಂಡ್‌ನ ಬೆನ್ಯಾಪಾ ಹಾಗೂ ನುಂತಕರ್ಣ್ ಐಮ್ಸಾರ್ಡ್‌ರನ್ನು 17-21, 10-21 ಗೇಮ್‌ಗಳ ಅಂತರದಿಂದ ಮಣಿಸಿದರು.

ಸೂಪರ್-1000 ಪಂದ್ಯಾವಳಿಯು ಹಲವು ಕುತೂಹಲಕಾರಿ ಪಂದ್ಯಗಳಿಗೆ ಸಾಕ್ಷಿಯಾಗಿದೆ. ಭಾರತೀಯ ಶಟ್ಲರ್‌ಗಳು ಬ್ಯಾಡ್ಮಿಂಟನ್ ಅಂಕಣದಲ್ಲಿ ತಮ್ಮ ಕೌಶಲ್ಯ ಹಾಗೂ ಬದ್ಧತೆಯನ್ನು ಪ್ರದರ್ಶಿಸಿದರು. ಮುಂಬರುವ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯಗಳು ರೋಚಕತೆಯ ಭರವಸೆ ಮೂಡಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News